ನವದೆಹಲಿ: ಮುಖ್ಯಮಂತ್ರಿ ನಿವಾಸದಲ್ಲಿ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರಿಗೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಏಪ್ರಿಲ್ 28 ರಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಮುಂದೆ ಹಾಜರಾಗಲು ಆದೇಶಿಸಲಾಗಿದೆ. ಈಗಾಗಲೇ ಮಾಜಿ ಮೇಯರ್ ಜಯಪ್ರಕಾಶ್ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ವಾಸು ರುಖ್ದ್ ಸೇರಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ.
ಏಪ್ರಿಲ್ 1 ರಂದು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಮುಖ್ಯಮಂತ್ರಿ ನಿವಾಸದ ಬಳಿ ಪ್ರತಿಭಟನೆ ನಡೆಸಿತ್ತು. ಕಾಶ್ಮೀರ ಫೈಲ್ಸ್ ಚಿತ್ರದ ಕುರಿತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿರುವ ಹೇಳಿಕೆ ವಿರೋಧಿಸಿ ಈ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಈ ಪ್ರತಿಭಟನೆ ವೇಳೆ ಕೆಲವರು ಮುಖ್ಯಮಂತ್ರಿ ನಿವಾಸದ ಹೊರಗೆ ಹೋಗಿ ಧ್ವಂಸ ಮಾಡಿದರು.
ಬೂಮ್ ಬ್ಯಾರಿಯರ್ ಮತ್ತು ಸಿಸಿಟಿವಿ ಒಡೆದಿದ್ದಲ್ಲದೇ, ಮುಖ್ಯ ಗೇಟ್‌ಗೆ ಬಣ್ಣ ಎರಚಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸಿವಿಲ್ ಲೈನ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು 8 ಆರೋಪಿಗಳನ್ನು ಬಂಧಿಸಿದ್ದರು. ಸುಮಾರು ಎರಡು ವಾರಗಳ ಕಾಲ ಜೈಲಿನಲ್ಲಿ ಕಳೆದ ನಂತರ ಅವರಿಗೆ ಜಾಮೀನು ನೀಡಲಾಗಿತ್ತು.
ಓದಿ: ಕೇಜ್ರಿವಾಲ್ ಮನೆ ಮೇಲೆ ದಾಳಿ: 'ಇದು ಬಿಜೆಪಿ ಗೂಂಡಾಗಳ ಕೃತ್ಯ' ಎಂದ ಮನೀಶ್ ಸಿಸೋಡಿಯಾ
ಈ ಸಂಬಂಧ ಹೆಚ್ಚಿನ ತನಿಖೆ ನಡೆಸಿದ ಪೊಲೀಸರು, ಮಾಜಿ ಮೇಯರ್ ಜೈ ಪ್ರಕಾಶ್ ಮತ್ತು ಯುವ ಮೋರ್ಚಾ ರಾಜ್ಯಾಧ್ಯಕ್ಷ ವಾಸು ರುಖ್ದಾದ್ ಅವರನ್ನು ಬಂಧಿಸಿದ್ದಾರೆ. ಆದರೆ, ಇಬ್ಬರಿಗೂ ಪೊಲೀಸ್ ಠಾಣೆಯಿಂದಲೇ ಜಾಮೀನು ನೀಡಲಾಗಿದೆ. ತೇಜಸ್ವಿ ನೇತೃತ್ವದಲ್ಲಿ ಈ ಪ್ರತಿಭಟನೆ ಆಯೋಜಿಸಲಾಗಿರುವುದರಿಂದ ದೆಹಲಿ ಪೊಲೀಸರು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯಗೆ ನೋಟಿಸ್ ಕಳುಹಿಸಿದ್ದು, ಏಪ್ರಿಲ್ 28 ರಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.
ಈ ಪ್ರಕರಣದಲ್ಲಿ ಇದುವರೆಗೆ ಸುಮಾರು 20ಕ್ಕೂ ಹೆಚ್ಚು ಆರೋಪಿಗಳು ಬೆಳಕಿಗೆ ಬಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪೈಕಿ 10 ಮಂದಿಯನ್ನು ಬಂಧಿಸಲಾಗಿತ್ತು. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸುವ ಅವಕಾಶವಿದ್ದು, ಈ ಕಾರಣದಿಂದ ಬಂಧಿತ ಆರೋಪಿಗಳಿಗೆ ಪೊಲೀಸ್ ಠಾಣೆಯಿಂದಲೇ ಜಾಮೀನು ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಮೊದಲ 8 ಆರೋಪಿಗಳನ್ನು ಮಾತ್ರ ಜೈಲಿಗೆ ಕಳುಹಿಸಲಾಗಿತ್ತು.