ಅಮರಾವತಿ/ಆಂಧ್ರಪ್ರದೇಶ : ಮಿಜೋರಾಂ-ಮ್ಯಾನ್ಮಾರ್ ಗಡಿಯಲ್ಲಿ ಅಸ್ಸೋಂ ರೈಫಲ್ಸ್ ವಶಪಡಿಸಿಕೊಂಡ ಮಾನವ ಕೂದಲಿಗೆ ಹಾಗೂ ತಮಗೆ ಯಾವುದೇ ಸಂಬಂಧವಿಲ್ಲ ಎಂದು ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಮಂಗಳವಾರ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಅಸ್ಸೋಂ ರೈಫಲ್ಸ್ 120 ಚೀಲಗಳ ಮಾನವ ಕೂದಲನ್ನು ವಶಪಡಿಸಿಕೊಂಡಿದೆ. ಯಾವುದೇ ಅಧಿಕೃತ ದಾಖಲೆಗಳಿಲ್ಲದಿರುವುದರಿಂದ ತಿರುಪತಿ ದೇವಸ್ಥಾನದಿಂದ ಬಂದಿರಬಹುದೆಂದು ಶಂಕಿಸಲಾಗಿತ್ತು. ಅಲ್ಲದೇ ಹೆಚ್ಚಿನ ಸಂಸ್ಕರಣೆಗಾಗಿ ಕೂದಲನ್ನು ಮ್ಯಾನ್ಮಾರ್ ಮತ್ತು ಇತರ ದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಶಂಕಿಸಿದ್ದರು.
ಆದರೆ, ದೇವಾಲಯದಲ್ಲಿ ಸಂಗ್ರಹಿಸಲಾದ ಎಲ್ಲಾ ಮಾನವ ಕೂದಲನ್ನು ನಿಗದಿತ ಜಿಎಸ್ಟಿ ಕಡಿತಗೊಳಿಸಿದ ನಂತರ ಅರ್ಹ ಬಿಡ್‌ದಾರರಿಗೆ ತ್ರೈಮಾಸಿಕ ಇ-ಹರಾಜು ವೇದಿಕೆಯಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾಗೇ ಹರಾಜು ಪ್ರಕ್ರಿಯೆ ಪೂರ್ಣಗೊಂಡ ನಂತರ, ಅದನ್ನು ವಿಲೇವಾರಿ ಮಾಡುವ ಷೇರುಗಳಲ್ಲಿ ಟಿಟಿಡಿಗೆ ಯಾವುದೇ ಪಾತ್ರವಿಲ್ಲ. ಮಾನವ ಕೂದಲನ್ನು ಮಾರುವ ಅನೇಕ ದೇವಾಲಯಗಳು ದೇಶದಲ್ಲಿವೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.