ನವದೆಹಲಿ: ಕೋವಿಡ್ ಉಲ್ಬಣ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಉಳಿದ ಮೂರು ಹಂತಗಳನ್ನು ಒಟ್ಟಿಗೆ ಮಾಡಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಡೆರೆಕ್ ಒ'ಬ್ರಿಯೆನ್ಗೆ ತಿಳಿಸಿದೆ.
ಪಶ್ಚಿಮ ಬಂಗಾಳ ಚುನಾವಣೆಯ ಉಳಿದ ಹಂತಗಳನ್ನು ಒಟ್ಟಿಗೆ ಮಾಡುವಂತೆ ಒ'ಬ್ರಿಯನ್ ನೀಡಿದ್ದ ಸಲಹೆಗೆ ಉತ್ತರಿಸಿದ ಚುನಾವಣಾ ಆಯೋಗ, 6,7 ಮತ್ತು 8 ಹಂತಗಳ ಚುನಾವಣೆಯನ್ನು ಒಟ್ಟಿಗೆ ಮಾಡುವ ಸಲಹೆ ಕಾರ್ಯಸಾಧ್ಯವಲ್ಲ ಎಂದಿದೆ.
ಮತದಾನದ ವೇಳೆ ಸುರಕ್ಷತೆಯನ್ನು ಕಾಪಾಡುವ ಸಲುವಾಗಿ ಯಾವುದೇ ವಿನಾಯಿತಿಗಳಿಲ್ಲದೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಲಾಗಿದೆ ಎಂದು ಆಯೋಗ ಹೇಳಿದೆ. ವಿಧಾನಸಭಾ ಚುನಾವಣೆಯ 1, 2, 3, 4 ಮತ್ತು 5 ಹಂತಗಳ ಮತದಾನ ಕ್ರಮವಾಗಿ ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10 ಮತ್ತು ಏಪ್ರಿಲ್ 17 ರಂದು ನಡೆಯಿತು.
ಆರನೇ ಹಂತದ ಮತದಾನ ಇಂದು ( ಏಪ್ರಿಲ್ 22) ನಡೆಯುತ್ತಿದೆ. ಏಳನೇ ಮತ್ತು ಎಂಟನೇ ಹಂತದ ಮತದಾನ ಏಪ್ರಿಲ್ 26 ಮತ್ತು ಏಪ್ರಿಲ್ 29 ರಂದು ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.
ಇದನ್ನೂ ಓದಿ: 'ಟೊಳ್ಳು ಭಾಷಣ, ಟೀಕಾ ಉತ್ಸವವಲ್ಲ..ಭಾರತಕ್ಕೆ ಪರಿಹಾರದ ಅವಶ್ಯಕತೆಯಿದೆ'
ಪಶ್ಚಿಮ ಬಂಗಾಳದಲ್ಲಿ ಕಳೆದ 24 ಗಂಟೆಗಳಲ್ಲಿ 10,784 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, 5,616 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 58 ಮೃತಪಟ್ಟಿದ್ದಾರೆ ಎಂದು ಬುಧವಾರ ಸಂಜೆ ರಾಜ್ಯ ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ. ರಾಜ್ಯದಲ್ಲಿ ಪ್ರಸ್ತುತ 63,496 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 10,710 ಜನರು ಕೋವಿಡ್ಗೆ ಬಲಿಯಾಗಿದ್ದಾರೆ.