ನೋಯ್ಡಾ(ಉತ್ತರ ಪ್ರದೇಶ): ಕೋವಿಡ್ ಸೋಂಕಿನಿಂದಾಗಿ ರೋಗಿವೋರ್ವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರಿಗೆ ರೆಮ್ಡಿಸಿವಿರ್ ಸೇರಿ ಅಗತ್ಯ ಔಷಧಿ ಒದಗಿಸುವಂತೆ ಸಂಬಂಧಿಕರು ಮುಖ್ಯ ವೈದ್ಯಕೀಯ ಅಧಿಕಾರಿಯ ಕಾಲು ಹಿಡಿದು ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶ ನೋಯ್ಡಾದ ಗೌತಮ್ ಬುದ್ಧ ನಗರದಲ್ಲಿನ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಮುಖ್ಯ ವೈದ್ಯಾಧಿಕಾರಿ ಮತ್ತೊಮ್ಮೆ ಕಚೇರಿಗೆ ಭೇಟಿ ನೀಡಿದ್ರೆ ಪೊಲೀಸ್ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗ್ತಿದೆ.
ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೋವಿಡ್ ರೋಗಿಗೆ ಅಗತ್ಯ ಔಷಧಿ ಸಿಗದ ಕಾರಣ ವೈದ್ಯಕೀಯ ಅಧಿಕಾರಿ ಕಚೇರಿಗೆ ತೆರಳಿ ಆತನ ಸಂಬಂಧಿಕರು ಮನವಿ ಮಾಡಿದ್ದಾರೆ. ಈ ವೇಳೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಪುರಸಭೆ ಮುಖ್ಯ ಅಧಿಕಾರಿಯಿಂದ ಕೋವಿಡ್ ಮೃತ ರೋಗಿ ಸಂಬಂಧಿಗೆ ಕಪಾಳಮೋಕ್ಷ! ವಿಡಿಯೋ
ರೋಗಿಗೆ ರೆಮ್ಡಿಸಿವಿರ್ ಔಷಧಿ ಒದಗಿಸುವಂತೆ ಕೇಳಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ಮಹಿಳೆಯರು ಹೇಳಿದ್ದಾರೆ. ಜತೆಗೆ ಸಿಎಂಒ ಮುಂದೆ ನಿಂತುಕೊಂಡು ಅವರ ಕಾಲು ಬೀಳಲು ಮುಂದಾಗಿದ್ದಾರೆ. ಈ ವೇಳೆ ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಿದ್ರೆ ಜೈಲಿಗೆ ಕಳುಹಿಸಲಾಗುವುದು ಎಂದು ಅಧಿಕಾರಿ ಬೆದರಿಕೆ ಹಾಕಿದ್ದಾರೆ. ಗೌತಮ್ ಬುದ್ಧನಗರದಲ್ಲಿ ಔಷಧಿ ಹಾಗೂ ಹಾಸಿಗೆಗಳ ಕೊರತೆ ಇಲ್ಲವೆಂದು ಜಿಲ್ಲಾಡಳಿತ ಹಾಗೂ ವೈದ್ಯಕೀಯ ಅಧಿಕಾರಿ ಹೇಳಿಕೊಂಡಿದ್ದರೂ ಇದೀಗ ಈ ಸಮಸ್ಯೆ ಉದ್ಭವವಾಗಿದೆ.