ಇಸ್ಲಾಮಾಬಾದ್, ಪಾಕಿಸ್ತಾನ: ತಜಕಿಸ್ತಾನದ ದುಶಾಂಬೆಯಲ್ಲಿ ಶಾಂಘೈ ಕೋ- ಆಪರೇಷನ್ ಆರ್ಗನೇಷನ್ (ಎಸ್ಸಿಓ) ಸಭೆ ನಡೆಯಲಿದ್ದು, ಭಾರತೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಅವರೊಂದಿಗೆ ಪ್ರತ್ಯೇಕವಾಗಿ ಯಾವುದೇ ಮಾತುಕತೆಯ ಸಾಧ್ಯತೆ ಇರುವುದಿಲ್ಲ ಎಂದು ಪಾಕಿಸ್ತಾನದ ಭದ್ರತಾ ಸಲಹೆಗಾರ ಮೊಯೀದ್ ಯೂಸೂಫ್ ಹೇಳಿದ್ದಾರೆ.
ಈ ಮೂಲಕ ಭಾರತ ಮತ್ತು ಪಾಕಿಸ್ತಾನದ ಉನ್ನತ ಮಟ್ಟದ ಅಧಿಕಾರಿಗಳು ಶಾಂಘೈ ಸಹಕಾರ ಸಂಘಟನೆಯ ಸಭೆಯ ನಂತರ ಭೇಟಿಯಾಗಬಹುದು ಎಂಬ ಊಹಾಪೋಹಗಳಿಗೆ ತೆರೆಬಿದ್ದಿದೆ. ಈ ಬಾರಿಯ ಸಭೆಯ ನಾಯಕತ್ವವನ್ನು ತಜಕಿಸ್ತಾನ ವಹಿಸಿಕೊಳ್ಳಲಿದೆ.
ಇದನ್ನೂ ಓದಿ: ದೇಶಾದ್ಯಂತ 500 ದೇವಾಲಯಗಳ ನಿರ್ಮಾಣ ಕಾರ್ಯಕ್ಕೆ ವೇಗ: ಟಿಟಿಡಿ
ಇತ್ತೀಚಿನ ದಿನಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಅನೇಕ ವಿಚಾರಗಳಲ್ಲಿ ಮೃದುತ್ವ ತೋರಿಸುತ್ತಿದೆ. ಕೆಲವು ದಿನಗಳ ಹಿಂದೆ ಪೂರ್ವ ಮತ್ತು ಪಶ್ಚಿಮ ಏಷ್ಯಾದಲ್ಲಿ ಭಾರತ ಮತ್ತು ಪಾಕ್ ನಡುವಿನ ಸಂಬಂಧ ಅತಿ ಮುಖ್ಯ ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಹೇಳಿದ್ದರು.
ಎಸ್ಸಿಓ ಸಭೆಯ ಬಗ್ಗೆ ಮತ್ತೊಂದಿಷ್ಟು..
ಶಾಂಘೈ ಸಹಕಾರ ಸಂಘಟನೆಯ ಸಭೆ ಜೂನ್ 23 ಮತ್ತು 24ರಂದು ನಡೆಯಲಿದ್ದು, ಈ ಸಂಘಟನೆಯಲ್ಲಿ ಸುಮಾರು 8 ದೇಶಗಳಿವೆ. ಈಗ ಎಂಟು ದೇಶಗಳ ಭದ್ರತಾ ಮಂಡಳಿಯ ಕಾರ್ಯದರ್ಶಿಗಳು ಅಥವಾ ಭದ್ರತಾ ಸಲಹೆಗಾರರ ಸಭೆ ನಡೆಯಲಿದ್ದು, ಇದು 16ನೇ ಸಭೆಯಾಗಲಿದೆ. ರಷ್ಯಾ, ಚೀನಾ, ಭಾರತ, ಪಾಕಿಸ್ತಾನ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳಾಗಿವೆ.