ನವದೆಹಲಿ: ತಮಿಳುನಾಡನ್ನು ವಿಭಜಿಸಿ ಮತ್ತೊಂದು ರಾಜ್ಯ ರಚಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಈ ಮೂಲಕ ಇತ್ತೀಚಿನ ಕೆಲವು ಬೆಳವಣಿಗೆಗಳು ಮತ್ತು ಗಾಳಿ ಸುದ್ದಿಗೆ ವಿರಾಮ ನೀಡಲಾಗಿದೆ.
ತಮಿಳುನಾಡಿನಿಂದ ಹೊಸದಾಗಿ ಕೇಂದ್ರ ಮೀನುಗಾರಿಕೆ, ಡೈರಿ, ಪಶುಸಂಗೋಪನೆ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವರಾದ ಎಲ್.ಮುರುಗನ್ ತಾನು ಕೊಂಗುನಾಡಿಗೆ ಸೇರಿದ್ದೇನೆ ಎಂದು ಹೇಳಿಕೊಂಡಿದ್ದರು.
ನಮಕ್ಕಲ್ ಜಿಲ್ಲೆಯ ಕೋನುರ್ಗೆ ಎಲ್.ಮುರುಗನ್ ಸೇರಿದ್ದು, ಇವರ ಹೇಳಿಕೆಯಿಂದಾಗಿ ಈ ಭಾಗದ ಜನರಲ್ಲಿ ಹೊಸ ರಾಜ್ಯ ರಚನೆಯ ಸುದ್ದಿಗಳು ಹರಿದಾಡತೊಡಗಿದವು. ಕೆಲವು ರಾಜಕೀಯ ಪಕ್ಷಗಳು ಎಲ್.ಮುರುಗನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರೆ, ಕೆಲವು ನಾಯಕರು ಬೆಂಬಲ ವ್ಯಕ್ತಪಡಿಸಿದ್ದರು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ್ದು, ತಮಿಳುನಾಡು ರಾಜ್ಯವನ್ನ ವಿಭಜಿಸಿ ಬೇರೊಂದು ರಾಜ್ಯ ರಚಿಸುವ ಯಾವುದೇ ಯೋಜನೆ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪೆರಂಬಲೂರ್ ಸಂಸದ ಪೆರಿವೆಂದರ್ ಮತ್ತು ಮಯಿಲಾದುತುರೈ ಸಂಸದ ರಾಮಲಿಂಗ ಈ ಕುರಿತು ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದು, ನಿತ್ಯಾನಂದರಾಯ್ ಲಿಖಿತ ಉತ್ತರ ಕೊಟ್ಟಿದ್ದು, ಮಾತ್ರವಲ್ಲದೇ, ಈ ಕುರಿತು ವಿವರಣೆ ನೀಡಿದರು.
ಇದನ್ನೂ ಓದಿ: ಉದ್ಯಮಿ ಮನ್ಸುಖ್ ಹಿರೇನ್ ಹತ್ಯೆ ಆರೋಪಿಗೆ 45 ಲಕ್ಷ ರೂಪಾಯಿ ಪಾವತಿ: ಕೋರ್ಟ್‌ಗೆ NIA ಮಾಹಿತಿ