ನವದೆಹಲಿ: ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, 15 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ, ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್‌ಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಯಾವುದೇ ವೈದ್ಯಕೀಯ ಪ್ರಮಾಣಪತ್ರವಿಲ್ಲದೆ ಬೂಸ್ಟರ್ ಡೋಸ್‌ಗಳನ್ನು ಪಡೆಯಬಹುದು. ಆದ್ರೆ, ಬೂಸ್ಟರ್ ಡೋಸ್ ಪಡೆಯುವ ಮೊದಲು ವೈದ್ಯರಿಂದ ಸಲಹೆ ಪಡೆಯುವಂತೆ ಕೇಂದ್ರ ತಿಳಿಸಿದೆ.
15-17 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನವು ಜನವರಿ 3, 2022 ರಿಂದ ಪ್ರಾರಂಭವಾಗುತ್ತದೆ. ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷ ಮತ್ತು ಮೇಲ್ಪಟ್ಟವರಿಗೆ ಜನವರಿ 10 ರಿಂದ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ.
CoWIN ಪ್ಲಾಟ್‌ಫಾರ್ಮ್‌ನಲ್ಲಿ ಜನವರಿ 1 ರಿಂದ ಲಸಿಕೆ ನೋಂದಣಿ ಪ್ರಾರಂಭವಾಗುತ್ತದೆ. ಜನವರಿ 3 ರಿಂದ ಆನ್‌ಲೈನ್ ನೋಂದಣಿ ನಡೆಯಲಿದೆ.
ಮಕ್ಕಳಿಗಾಗಿ ಪ್ರತ್ಯೇಕ ಲಸಿಕೆ ಕೇಂದ್ರಗಳು:
15-18 ವರ್ಷ ವಯಸ್ಸಿನವರಿಗೆ ಮೀಸಲಾದ ಕೋವಿಡ್ ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯಗಳು ಮತ್ತು ಕೇಂದಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಗಿದೆ.
ಚುನಾವಣೆ ನಡೆಯುವ ರಾಜ್ಯಗಳಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆಗಳಿವೆ. ಕೋವಿಡ್-19 ವ್ಯಾಕ್ಸಿನೇಷನ್‌ನ ವೇಗ ಮತ್ತು ವ್ಯಾಪ್ತಿಯನ್ನು ಗಮನಾರ್ಹವಾಗಿ ವರ್ಧಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಈ ರಾಜ್ಯಗಳು ತಮ್ಮ ಜಿಲ್ಲಾವಾರು ಲಸಿಕೆ ಯೋಜನೆಗಳ ಅನುಷ್ಠಾನವನ್ನು ಪ್ರತಿದಿನ ಪರಿಶೀಲಿಸಬೇಕು ಎಂದು ರಾಜೇಶ್ ಭೂಷಣ್ ಹೇಳಿದರು.