ನವದೆಹಲಿ: ಜುಲೈ 31 ರ ಅಂತಿಮ ದಿನಾಂಕದೊಳಗೆ ಹೆಚ್ಚಿನ ರಿಟರ್ನ್ಸ್ ಬರುವ ನಿರೀಕ್ಷೆಯಿರುವುದರಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ. ಈ ತಿಂಗಳ ಕೊನೆಯ ದಿನದಂದು. ಆದಾಯ ತೆರಿಗೆ ಇಲಾಖೆ ಕನಿಷ್ಠ 1 ಕೋಟಿ ರಿಟರ್ನ್ಸ್ ಸಲ್ಲಿಸುವ ನಿರೀಕ್ಷೆಯಿದೆ. ಕಳೆದ ವರ್ಷ, ನಿಗದಿತ ಕೊನೆಯ ದಿನಾಂಕದಂದು ಸರ್ಕಾರವು 50 ಲಕ್ಷಕ್ಕೂ ಹೆಚ್ಚು ರಿಟರ್ನ್ಸ್‌ಗಳನ್ನು ಸ್ವೀಕರಿಸಿತ್ತು.
ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಸರ್ಕಾರವು ತೆರಿಗೆ ಪಾವತಿದಾರರಿಗೆ ರಿಟರ್ನ್ಸ್ ಸಲ್ಲಿಸಲು ಗಡುವನ್ನು ಕಾಲಕಾಲಕ್ಕೆ ವಿಸ್ತರಿಸಿತ್ತು ಎಂಬುದನ್ನು ಗಮನಿಸಬಹುದು. ಆದರೆ ಈ ಬಾರಿ ಗಡುವು ವಿಸ್ತರಣೆ ಮಾಡದಿರುವ ಇಲಾಖೆ ನಿರ್ಧರಿಸಿದೆ. 10,36,43,750 ವೈಯಕ್ತಿಕ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಇದುವರೆಗೂ 3 ಕೋಟಿಗೂ ಹೆಚ್ಚು ಜನರು ತಮ್ಮ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ ಎಂದು ಇಲಾಖೆ ಟ್ವೀಟ್ ಮೂಲಕ ದೃಢ ಪಡಿಸಿದೆ.
ಐಟಿ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆಗಳು ಹೀಗಿವೆ: ಐಟಿ ರಿಟರ್ನ್ಸ್ ಸಲ್ಲಿಕೆಯನ್ನು ಸುಲಭಗೊಳಿಸಲು ಆದಾಯ ತೆರಿಗೆ ಇಲಾಖೆ ಕಾಲಕಾಲಕ್ಕೆ ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ತೆರಿಗೆ-ವಿನಾಯತಿ ಮಿತಿಗಿಂತ ಹೆಚ್ಚು ಆದಾಯ ಗಳಿಸಿದವರು ನಿಯಮಗಳ ಪ್ರಕಾರ ನಿಗದಿತ ಐಟಿಆರ್ ನಮೂನೆಯಲ್ಲಿ ರಿಟರ್ನ್ಸ್ ಸಲ್ಲಿಸಬೇಕು.
ಇದರ ಫಾರ್ಮ್‌ಗಳು ಈಗಾಗಲೇ ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌ನಲ್ಲಿ ಲಭ್ಯವಿವೆ. ರಿಟರ್ನ್‌ಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈ ಮೊದಲೇ ತುಂಬಿದ ಫಾರ್ಮ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಾಗುತ್ತದೆ. ಅದಕ್ಕೂ ಮೊದಲು, ನೀವು ನಿಮ್ಮ ಆದಾಯದ ಎಲ್ಲ ಪುರಾವೆಗಳನ್ನು ಸಂಗ್ರಹಿಸಬೇಕು ಮತ್ತು ಅವುಗಳನ್ನು ಏನು ಮಾಡಬೇಕೆಂಬುದನ್ನು ತಿಳಿಯಬೇಕು.
ಜುಲೈ 31 ನೆನಪಿಡಿ: 2022ರ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಅಂತಿಮ ದಿನಾಂಕ ಹತ್ತಿರದಲ್ಲಿದೆ. ಪ್ರತಿಯೊಬ್ಬ ತೆರಿಗೆದಾರರು ತಮ್ಮ ಐಟಿಆರ್ ಅನ್ನು ಕೊನೆಯ ದಿನಾಂಕದ ಮೊದಲು ಸಲ್ಲಿಸುವುದು ಮುಖ್ಯ. ಹಾಗೆ ಮಾಡಲು ವಿಫಲವಾದರೆ ದಂಡ ಪಾವತಿಸಬೇಕಾಗುತ್ತದೆ. ಹಣಕಾಸು ವರ್ಷ 2021-22 ರಲ್ಲಿ ಹೆಚ್ಚಿನ ತೆರಿಗೆದಾರರಿಗೆ ITR ಅನ್ನು ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 ಆಗಿದೆ.
ಫಾರ್ಮ್ 16: ಇದು ಆದಾಯ ತೆರಿಗೆ ನಮೂನೆಯಾಗಿದ್ದು, ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಕಡಿತಗೊಳಿಸಿದ ತೆರಿಗೆಯ ಮಾಹಿತಿಯನ್ನು ನೀಡಲು ಬಳಸಲಾಗುತ್ತದೆ. ಉದಾಹರಣೆಗೆ, ಕಳೆದ ಹಣಕಾಸು ವರ್ಷದಲ್ಲಿ (2021-22) ನಿಮ್ಮ ಆದಾಯವು ತೆರಿಗೆ ವಿನಾಯಿತಿ ಮಿತಿಗಿಂತ ಹೆಚ್ಚಿದ್ದರೆ, ಕಡಿತಗೊಳಿಸಿದ ತೆರಿಗೆಯ ವಿವರಗಳನ್ನು ಮತ್ತು ವರ್ಷಕ್ಕೆ ನೀವು ಕ್ಲೈಮ್ ಮಾಡಿದ ವಿನಾಯಿತಿಗಳನ್ನು ನಂತರ ಫಾರ್ಮ್ ತೋರಿಸುತ್ತದೆ. ಈಗಾಗಲೇ, ಕೆಲವು ಕಂಪನಿಗಳು ಫಾರ್ಮ್ 16 ಬಿಡುಗಡೆ ಮಾಡಿದ್ದರೆ, ಇತರರು ಶೀಘ್ರದಲ್ಲೇ ಅವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಫಾರ್ಮ್ 16 ರಲ್ಲಿ ಉಲ್ಲೇಖಿಸಲಾದ ಆದಾಯವು ಈಗಾಗಲೇ ತುಂಬಿದ ಐಟಿಆರ್ ಮೊತ್ತಕ್ಕೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ನೀವು ಪರಿಶೀಲಿಸಬೇಕು.
ಫಾರ್ಮ್ 16 ಎ: ಇದು ಸಂಬಳದ ಹೊರತಾದ ಆದಾಯದ ಮೇಲೆ ವಿಧಿಸಲಾದ ಟಿಡಿಎಸ್ ಅನ್ನು ತೋರಿಸುತ್ತದೆ. ಉದಾಹರಣೆಗೆ, ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿಯ ಮೂಲಕ ಗಳಿಕೆಯು ರೂ. 40,000 ಕ್ಕಿಂತ ಹೆಚ್ಚಿದ್ದರೆ, ಅದು TDS ಗೆ ಒಳಪಡುತ್ತದೆ. ಅಂಥ ಸಂದರ್ಭಗಳಲ್ಲಿ, ಫಾರ್ಮ್ 16 ಎ ನೀಡಲಾಗುತ್ತದೆ. ಡಿವಿಡೆಂಡ್ ಪಾವತಿಯು ರೂ. 5,000 ಮೀರಿದರೆ ಮ್ಯೂಚುವಲ್ ಫಂಡ್ ಕಂಪನಿಗಳು ಈ ಫಾರ್ಮ್ ಅನ್ನು ನೀಡುತ್ತವೆ.
ಬಡ್ಡಿ ಗಳಿಕೆಯ ಪುರಾವೆ: ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಮಾಡಿದ ಠೇವಣಿಗಳ ಮೇಲೆ ನೀವು ಗಳಿಸಿದ ಬಡ್ಡಿಯ ದಾಖಲೆಗಳನ್ನು ಸಂಗ್ರಹಿಸಿ. ಆಯಾ ಬಡ್ಡಿ ಆದಾಯಗಳನ್ನು ಪ್ರತ್ಯೇಕವಾಗಿ ಐಟಿಆರ್‌ನಲ್ಲಿ ತೋರಿಸಬೇಕು. ಉಳಿತಾಯ ಖಾತೆಗಳು ಮತ್ತು ಸ್ಥಿರ ಠೇವಣಿಗಳ ಮೂಲಕ ಗಳಿಸಿದ ಬಡ್ಡಿಯು ನಿಯಮಗಳ ಪ್ರಕಾರ ತೆರಿಗೆಗೆ ಒಳಪಟ್ಟಿರುತ್ತದೆ. ಸೆಕ್ಷನ್ 80TTA ಪ್ರಕಾರ, 10,000 ರೂ.ವರೆಗಿನ ಉಳಿತಾಯ ಖಾತೆಯಲ್ಲಿ ಗಳಿಸಿದ ಬಡ್ಡಿಗೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಅದಕ್ಕೂ ಮೀರಿದರೆ ಒಟ್ಟು ಆದಾಯದಲ್ಲಿ ಸೇರಿಸಿ ಅದಕ್ಕೆ ತಕ್ಕಂತೆ ತೆರಿಗೆ ಕಟ್ಟಬೇಕಾಗುತ್ತದೆ.
ವಾರ್ಷಿಕ ಆದಾಯ ವಿವರ: ಕಳೆದ ವರ್ಷ ನವೆಂಬರ್‌ನಲ್ಲಿ ಆದಾಯ ತೆರಿಗೆ ಇಲಾಖೆಯು ವಾರ್ಷಿಕ ಆದಾಯ ಸ್ಟೇಟ್ಮೆಂಟ್ ನೀಡುವುದನ್ನು (ಎಐಎಸ್) ಜಾರಿಗೆ ತಂದಿತ್ತು. ಇದು ಹಣಕಾಸು ವರ್ಷದಲ್ಲಿ ತೆರಿಗೆದಾರರ ಬಹುತೇಕ ಎಲ್ಲಾ ಹಣಕಾಸು ವಹಿವಾಟುಗಳ ವಿವರಗಳನ್ನು ಒಳಗೊಂಡಿರುತ್ತದೆ. ರಿಟರ್ನ್ಸ್ ಸಲ್ಲಿಸುವ ಸಮಯದಲ್ಲಿ ನಮೂದಿಸಿದ ಎಲ್ಲಾ ಆದಾಯಗಳನ್ನು ತೋರಿಸಬೇಕು. ಈ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಹಾಗೂ ಇದರಲ್ಲೇನಾದರೂ ತಪ್ಪುಗಳು ಕಂಡು ಬಂದಲ್ಲಿ, ಅದರ ಬಗ್ಗೆ ಪೂರಕ ದಾಖಲೆಗಳೊಂದಿಗೆ ತೆರಿಗೆ ಇಲಾಖೆಗೆ ತಿಳಿಸಿ.
ಫಾರ್ಮ್ 26ಎಎಸ್: ಈ ಫಾರ್ಮ್ ಅನ್ನು ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. ಇದು ಕಳೆದ ಹಣಕಾಸು ವರ್ಷದಲ್ಲಿ ಗಳಿಸಿದ ಆದಾಯ ಮತ್ತು ಪಾವತಿಸಿದ ತೆರಿಗೆಗಳ ಎಲ್ಲಾ ವಿವರಗಳನ್ನು ಒಳಗೊಂಡಿರುತ್ತದೆ. ನಿಮ್ಮ ಬಳಿಯಿರುವ TDS ಪ್ರಮಾಣಪತ್ರಗಳೊಂದಿಗೆ 26AS ನಲ್ಲಿ TDS ವಿವರಗಳನ್ನು ಹೊಂದಿಸಿ ಪರಿಶೀಲಿಸಿ.
ವಿನಾಯಿತಿಗಳು: ಆದಾಯ ತೆರಿಗೆ ಪಾವತಿಯ ಹಳೆಯ ವ್ಯವಸ್ಥೆಯನ್ನು ಆಯ್ಕೆ ಮಾಡಿದ ಜನರು, ತಾವು ಪಡೆದ ವಿನಾಯಿತಿಗಳ ಪುರಾವೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಸಾಮಾನ್ಯವಾಗಿ, ನಿಮ್ಮ ಕಂಪನಿಗಳಿಗೆ ಸಂಬಂಧಿತ ಎಲ್ಲ ದಾಖಲೆಗಳನ್ನು ನೀವು ಸಲ್ಲಿಸಿದ್ದರೂ ಕೂಡ ಈ ಎಲ್ಲ ವಿವರಗಳನ್ನು ಫಾರ್ಮ್ 16 ರಲ್ಲಿ ಗುರುತಿಸಲಾಗಿದೆಯೇ ಎಂದು ಪರಿಶೀಲಿಸುವುದು ಉತ್ತಮ. ಬಹಿರಂಗಪಡಿಸದ ತೆರಿಗೆ-ಉಳಿತಾಯ ಹೂಡಿಕೆಗಳನ್ನು ರಿಟರ್ನ್ಸ್ ಸಮಯದಲ್ಲಿ ಕ್ಲೈಮ್ ಮಾಡಬಹುದು.
ಕ್ಯಾಪಿಟಲ್ ಗೇನ್ಸ್: ಸ್ಥಿರಾಸ್ತಿ, ಷೇರುಗಳು ಮತ್ತು ಮ್ಯೂಚುವಲ್ ಫಂಡ್ ಘಟಕಗಳ ಮಾರಾಟದಂತಹ ವಹಿವಾಟುಗಳಿಂದ ಗಳಿಸಿದ ಹಣವನ್ನು ಬಂಡವಾಳ ಲಾಭ (ಕ್ಯಾಪಿಟಲ್ ಗೇನ್ಸ್) ಎಂದು ಆದಾಯದಲ್ಲಿ ತೋರಿಸಬೇಕು. ಬಂಡವಾಳ ಲಾಭದ ಮೂಲಕ ಆದಾಯ ಗಳಿಸುವವವರು ITR-1 ಬದಲಿಗೆ ITR-2 ಅಥವಾ ITR-3 ನಲ್ಲಿ ರಿಟರ್ನ್ಸ್ ಸಲ್ಲಿಸಬೇಕು.
ಬ್ಯಾಂಕ್ ಖಾತೆಗಳು: 2021-22ರಲ್ಲಿ ತೆರಿಗೆದಾರರು ನಿರ್ವಹಿಸಿದ ಬ್ಯಾಂಕ್ ಖಾತೆಗಳನ್ನು ರಿಟರ್ನ್ಸ್‌ನಲ್ಲಿ ಬಹಿರಂಗಪಡಿಸಬೇಕು. ಈ ಖಾತೆಗಳನ್ನು ಮುಚ್ಚಿದರೂ ರಿಟರ್ನ್ಸ್‌ನಲ್ಲಿ ನಮೂದಿಸಬೇಕಾಗುತ್ತದೆ.
ಇದನ್ನೂ ಓದಿ: GST on Chit Fund.. ಜಿಎಸ್ಟಿ ಹೆಚ್ಚಳ ವಿರೋಧಿಸಿ ಬೆಂಗಳೂರಲ್ಲಿ ಪ್ರತಿಭಟನೆ