ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದ್ದು, ಆಗಸ್ಟ್ 8 ರಿಂದ ಚರ್ಚೆಗೆ ಬರುವ ಸಾಧ್ಯತೆ ಇದೆ. ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅವರ ಬದಲಿಗೆ ಸಂಸದ ಸ್ಥಾನವನ್ನು ಮರಳಿ ಪಡೆದು ಸಂಸತ್ ಪ್ರವೇಶಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಲುವಳಿಯ ಚರ್ಚೆಯನ್ನು ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.
ಲೋಕಸಭೆಯ ಕಾರ್ಯಸೂಚಿಯ ಪ್ರಕಾರ ಆಗಸ್ಟ್ 8 ರಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ಕಾಂಗ್ರೆಸ್ ಮಂಡಿಸಲಿದೆ. ನಿಲುವಳಿ ಮಂಡನೆಗೆ ಸೂಚಿಸಿರುವ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಪ್ರಸ್ತಾವನೆಯನ್ನು ಚರ್ಚೆಗೆ ತರಲಿದ್ದರು. ಆದರೆ, ಪಕ್ಷದ ಮೂಲಗಳ ಪ್ರಕಾರ, ಪ್ರಸ್ತಾಪವನ್ನು ಲೋಕಸಭೆಯಲ್ಲಿ ಅಂಗೀಕರಿಸಿದ ಬಳಿಕ ಚರ್ಚೆಯನ್ನು ಯಾರು ಆರಂಭಿಸಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ. ಹೀಗಾಗಿ ಗೌರವ್ ಗೊಗೊಯ್ ಬದಲಿಗೆ ರಾಹುಲ್ ಗಾಂಧಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಮೂರು ದಿನ ಅವಿಶ್ವಾಸ ಚರ್ಚೆ: ಸಂಸತ್ತಿನ ಮೂಲಗಳ ಪ್ರಕಾರ, ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯು ಇಂದಿನಿಂದ(ಆಗಸ್ಟ್ 8) ಪ್ರಾರಂಭವಾಗುವ ನಿರೀಕ್ಷೆಯಿದೆ. ಮುಂದಿನ ಎರಡು ದಿನಗಳು ಅಂದರೆ ಆಗಸ್ಟ್ 9 ಮತ್ತು 10 ರವರೆಗೂ ಮುಂದುವರಿಯುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10 ರಂದು ಪ್ರಸ್ತಾವನೆಯ ಮೇಲಿನ ಚರ್ಚೆಗೆ ಉತ್ತರಿಸಲಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ 9 ಮತ್ತು 10 ರ ಲೋಕಸಭೆ ಕಾರ್ಯಸೂಚಿಯನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಅವಿಶ್ವಾಸ ಗೊತ್ತುವಳಿ ಮಂಡನೆ ಕುರಿತ ಚರ್ಚೆಯನ್ನು ರಾಹುಲ್‌ಗಾಂಧಿ ಪ್ರಧಾನ ವ್ಯಕ್ತಿಯಾಗಿ ಆರಂಭಿಸಿದರೆ ಸರ್ಕಾರದ ಮೇಲೆ ಒತ್ತಡ ಹೇರಬಹುದು ಎಂಬ ಅಭಿಪ್ರಾಯವನ್ನು ಕಾಂಗ್ರೆಸ್ ಹೊಂದಿದೆ. ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ಗೆ ನೀಡಲಾಗಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಅವರೀಗ ಸಂಸತ್ ಸದಸ್ಯತ್ವವನ್ನು ಮರಳಿ ಪಡೆದಿದ್ದಾರೆ.
ಇದೇ ಉತ್ಸಾಹದಲ್ಲಿ ಇಂದಿನ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಲಿರುವ ರಾಹುಲ್, ಪ್ರಸ್ತಾವಿತ ನಿಲುವಳಿ ಮೇಲೆ ಮಾತನಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಅಲ್ಲದೇ, ರಾಹುಲ್ರ ಸದ್ಯದ ಪ್ರಸಿದ್ಧಿಯ ಲಾಭ ಪಡೆಯಲು ಇಂಡಿಯಾ ಒಕ್ಕೂಟ ಕೂಡ ಮುಂದಾಗಿದೆ.
ಆದಾಗ್ಯೂ ರಾಹುಲ್ ಗಾಂಧಿ ಅವರು ನಿಲುವಳಿ ಚರ್ಚೆ ಆರಂಭಿಸಲಿದ್ದಾರೆ ಎಂಬ ಬಗ್ಗೆ ಕಾಂಗ್ರೆಸ್ ಮಾಹಿತಿ ನೀಡಿಲ್ಲ. ಲೋಕಸಭೆ ಕಾರ್ಯಸೂಚಿ ಪ್ರಕಾರ, ಸಂಸದ ಗೌರವ್ ಗೊಗೊಯ್ ಅವರೇ ಅವಿಶ್ವಾಸ ನಿರ್ಣಯವನ್ನು ಮಂಡಿಸಲಿದ್ದಾರೆ. ಕೊನೆ ಕ್ಷಣದಲ್ಲಿ ಚರ್ಚೆ ಆರಂಭಕ್ಕೆ ಯಾರನ್ನು ಬೇಕಾದರೂ ಸೂಚಿಸುವ ಅಧಿಕಾರ ಪಕ್ಷಕ್ಕಿರುವ ಕಾರಣ ರಾಹುಲ್ ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ನಿರೀಕ್ಷೆ ಇದೆ.