ನಾಗ್ಪುರ(ಮಹಾರಾಷ್ಟ್ರ): ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕರ್ನಾಟಕದ ಬೆಳಗಾವಿ ಜೈಲಿನಿಂದಲೇ 2 ಬಾರಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಸಲು ಮುಂಬೈ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ತನಿಖೆಯ ನಡುವೆಯೂ ನಾಗ್ಪುರ ಪೊಲೀಸರು ಪ್ರತ್ಯೇಕ ಆರೋಪಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ದರೋಡೆ ಪ್ರಕರಣದಲ್ಲಿ ಬೆಳಗಾವಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ದರೋಡೆಕೋರ ಜಯೇಶ್ ಪೂಜಾರಿ ಆಲಿಯಾಸ್ ಶಕೀರ್ ಮತ್ತು ಆತನ ಸಹಚರ ಕ್ಯಾಪ್ಟನ್ ನಜರ್ ಅಫ್ಸರ್ ಪಾಷಾ ಎಂಬುವರು ಜೈಲಿನಿಂದಲೇ ವರ್ಷದ ಆರಂಭದಲ್ಲಿ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಿಸಬೇಕು. ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದರು.
ಕರೆ ಮಾಹಿತಿಯನ್ನು ಬೆನ್ನಟ್ಟಿದ ಪೊಲೀಸರು, ಅದು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಂದಿದ್ದನ್ನು ಪತ್ತೆ ಮಾಡಿದ್ದರು. ಬೆದರಿಕೆ ಹಾಕಿದ ಜಯೇಶ್ ಪೂಜಾರಿಯನ್ನು ಬಂಧಿಸಿ, ನಾಗ್ಪುರಕ್ಕೆ ಕರೆದೊಯ್ಯಲಾಗಿದೆ. ಈ ಬಗ್ಗೆ ಎನ್ಐಎ ಕೂಡ ಪ್ರತ್ಯೇಕ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದೆ.
ಕೇಸ್ಗಳ ವಿಲೀನಕ್ಕೆ ತಾಂತ್ರಿಕ ಸಮಸ್ಯೆ: ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗ್ಪುರ ಪೊಲೀಸರು ಮತ್ತು ಮುಂಬೈ ಎನ್ಐಎ ಪ್ರತ್ಯೇಕ ಕೇಸ್ ದಾಖಲಿಸಿವೆ. ಎರಡೂ ದೂರುಗಳನ್ನು ವಿಲೀನ ಮಾಡಲು ನಾಗ್ಪುರದ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಎನ್‌ಐಎ ಮನವಿ ಮಾಡಿತ್ತು. ಆದರೆ, ತಾಂತ್ರಿಕ ಮತ್ತು ಕಾನೂನು ಸಮಸ್ಯೆಗಳ ಕಾರಣ ತನಿಖಾ ಸಂಸ್ಥೆಯ ಬೇಡಿಕೆಯನ್ನು ಕೋರ್ಟ್ ತಿರಸ್ಕರಿಸಿತ್ತು.
ಹಾಗಾಗಿ, ಇದೀಗ ನಾಗ್ಪುರ ಪೊಲೀಸರು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ನಾಗ್ಪುರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲು ಕೆಲ ದಿನಗಳ ಕಾಲಾವಕಾಶ ಕೇಳುವ ಸಾಧ್ಯತೆಯೂ ಇದೆ. ಜಯೇಶ್ ಪೂಜಾರಿ, ಆತನ ಸಹಚರ ಕ್ಯಾಪ್ಟನ್ ನಜರ್ ಅಫ್ಸರ್ ಪಾಷಾ ಮತ್ತು ಇತರರ ವಿರುದ್ಧ ಬೆಂಗಳೂರಿನಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಅನ್ನು ಬೆಂಗಳೂರು ನ್ಯಾಯಾಲಯಕ್ಕೆ ಮುಂಬೈ ಎನ್ಐಎ ಸಲ್ಲಿಸಲಿದೆ.
ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಕ್ಕಾಗಿ ಜಯೇಶ್ ಪೂಜಾರ ಅಲಿಯಾಸ್ ಶಕೀರ್ ವಿರುದ್ಧ ನಾಗ್ಪುರ ಪೊಲೀಸರು ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಜಯೇಶ್ ಪೂಜಾರಿ ನಿಷೇಧಿತ ಸಂಘಟನೆಯಾದ ಪಿಎಫ್‌ಐ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಕಾರ್ಯದರ್ಶಿಯಾಗಿದ್ದ ಮೊಹಮ್ಮದ್ ಅಫ್ಸರ್ ಪಾಷಾ ಅವರ ಸಂಪರ್ಕಕ್ಕೆ ಬಂದಿದ್ದ. ಇನ್ನೊಬ್ಬ ಮೂಲಭೂತವಾದಿಯ ಮಾತು ಕೇಳಿ ಕೇಂದ್ರ ಸಚಿವರಿಗೆ ಬೆದರಿಕೆ ಹಾಕಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಬೆದರಿಕೆ ಮತ್ತು ಸುಲಿಗೆ ಪ್ರಕರಣದಲ್ಲಿ ಸದ್ಯಕ್ಕೆ ದರೋಡೆಕೋರ ಜಯೇಶ್ ಪೂಜಾರಿ ನಾಗ್ಪುರ ಪೊಲೀಸರ ಬಂಧನದಲ್ಲಿದ್ದಾನೆ. ತನಿಖೆ ವೇಳೆ ಹಲವು ಮುಖಂಡರಿಗೆ ಬೆದರಿಕೆ ಹಾಕಿರುವುದೂ ಗೊತ್ತಾಗಿದೆ. ಎನ್ಐಎ ಜೊತೆಗೆ, ನಾಗ್ಪುರ ಪೊಲೀಸರ ತನಿಖೆಯಲ್ಲೂ ಆರೋಪಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಸುಳಿವು ಸಿಕ್ಕಿದೆ.
ಇದನ್ನೂ ಓದಿ: ನಿತಿನ್ ಗಡ್ಕರಿಗೆ ಕೊಲೆ ಬೆದರಿಕೆ: ಹಿಂಡಲಗಾ ಜೈಲಿನ ಕೈದಿ ವಿರುದ್ಧ ಎಫ್ಐಆರ್ ದಾಖಲಿಸಿದ ಎನ್ಐಎ