ನವದೆಹಲಿ: ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಿರುದ್ಯೋಗ, ಹಣದುಬ್ಬರ ಮತ್ತು ವಿದೇಶಿ ನೀತಿಗಳ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿದ್ದು, ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ಭಾರತದಲ್ಲಿ ಕರಾಳ ಯುಗ ಅಸ್ತಿತ್ವದಲ್ಲಿತ್ತು ಎಂದಿರುವ ವಿತ್ತ ಸಚಿವೆ, ಭ್ರಷ್ಟಾಚಾರ, ಹಣದುಬ್ಬರ ಮತ್ತು ಆರ್ಥಿಕತೆ ಸಂಪೂರ್ಣವಾಗಿ ಹಿಂದೆ ಉಳಿಯಲು ಕಾಂಗ್ರೆಸ್ ನೇರ ಕಾರಣವಾಗಿತ್ತು ಎಂದಿದ್ದಾರೆ.
ಅತ್ಯಧಿಕ ಭ್ರಷ್ಟಾಚಾರ, ಹಣದುಬ್ಬರ ಮತ್ತು ವಿದೇಶಿ ನೀತಿ ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ಕರಾಳ ಯುಗಕ್ಕೆ ಕಾರಣವಾಗಿದ್ದು, ಕೇಂದ್ರದಲ್ಲಿ ಇದೀಗ ಆಡಳಿತ ನಡೆಸುತ್ತಿರುವ ಬಿಜೆಪಿ ಇವೆಲ್ಲದಕ್ಕೂ ಕಡಿವಾಣ ಹಾಕಿದೆ ಎಂದರು. 2020-21ರಲ್ಲಿ ದೇಶದಲ್ಲಿ 44 ಯೂನಿಕಾರ್ನ್ ಗುರುತಿಸಲಾಗಿದ್ದು, ಇದು ಅಮೃತ್ ಕಾಲ್ ಆಗಿದೆ ಎಂದರು.
ಇದನ್ನೂ ಓದಿರಿ: ಭಾರತ-ವೆಸ್ಟ್ ಇಂಡೀಸ್ ಪಂದ್ಯದ ಮೇಲೆ ಬೆಟ್ಟಿಂಗ್... ಮೂವರು ಬುಕ್ಕಿಗಳ ಬಂಧನ
2020-21ರಲ್ಲಿ 44.58 ಕೋಟಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಖಾತೆ ತೆರೆಯಲಾಗಿದ್ದು, 1.57 ಲಕ್ಷ ಕೋಟಿ ರೂ. ಠೇವಣಿ ಸಂಗ್ರಹವಾಗಿದೆ ಎಂದು ವಿತ್ತ ಸಚಿವೆ ತಿಳಿಸಿದರು. ಇದೇ ವೇಳೆ ಗೋವಾ ವಿಧಾನಸಭೆ ಚುನಾವಣೆ ಪರ ಬ್ಯಾಟ್ ಮಾಡಿದ ಅವರು, ಪ್ರತಿಯೊಬ್ಬರು ಫೆ. 14ರಂದು ಬಿಜೆಪಿಗೆ ಮತ ಹಾಕುತ್ತಾರೆ ಎಂದರು.