ಹರಿದ್ವಾರ(ಉತ್ತರಾಖಂಡ್): ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದ ನಿರಂಜನಿ ಅಖಾಡದ ಪಂಚ ಪರಮೇಶ್ವರ ಶ್ರೀಮಹಂತ್ ಮನೀಶ್ ಭಾರತಿ ಗುರುವಾರ ಹೃಷಿಕೇಶದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ನಿಧನರಾಗಿದ್ದಾರೆ.
ಏಪ್ರಿಲ್ 1ರಂದು ಆರಂಭವಾಗಿದ್ದ ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಮನೀಶ್ ಭಾರತಿ ಅವರಿಗೆ ಕೋವಿಡ್ ದೃಢಪಟ್ಟಿದ್ದು, ಕೋವಿಡ್ನಿಂದ ಮೃತಪಟ್ಟ ನಾಲ್ಕನೇ ಸಂತರಾಗಿದ್ದಾರೆ.
ಮನೀಶ್ ಭಾರತಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಒಂದು ವಾರದ ಹಿಂದೆ ಅವರನ್ನು ಏಮ್ಸ್ಗೆ ದಾಖಲಿಸಲಾಗಿತ್ತು ಎಂದು ನಿರಂಜನಿ ಅಖಾಡ ಕಾರ್ಯದರ್ಶಿ ರವೀಂದ್ರ ಪುರಿ ಹೇಳಿದ್ದಾರೆ.
ಇದನ್ನೂ ಓದಿ: ವಿಧಾನಸಭಾ ಚುನಾವಣಾ ಫಲಿತಾಂಶದಂದು ತಮಿಳುನಾಡು ಸಂಪೂರ್ಣ 'ಲಾಕ್'.!
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 17ರಂದು ನಡೆಯುವ ಕುಂಭಮೇಳದ ಶಾಹಿ ಸ್ನಾನವನ್ನು ಸಾಂಕೇತಿಕವಾಗಿ ಆಚರಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಸರಳವಾಗಿ ಕುಂಭಮೇಳದಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದರು.
ಜೂನಾ, ಅಗ್ನಿ, ಅವಹಾನ್, ಕಿನ್ನಾರ್, ಉದಾಸಿನ್, ಬಡಾ, ಮತ್ತು ನಯಾ ಉದಾಸಿನ್, ನಿರ್ಮಲ್ ಮತ್ತು ನಿರಂಜನಿ ಅಖಾಡಗಳ ಸುಮಾರು 2,000 ಮಂದಿ, ಮೂವರು ಭೈರಾಗಿ ಅಖಾಡಗಳು ಸಾಂಕೇತಿಕವಾಗಿ ಶಾಹಿ ಸ್ನಾನದಲ್ಲಿ ಪಾಲ್ಗೊಂಡಿದ್ದವು.
ಉತ್ತರಾಖಂಡದಲ್ಲಿ ಸೋಮವಾರ 5,058 ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, ರಾಜಧಾನಿ ಡೆಹ್ರಾಡೂನ್‌ನಲ್ಲೇ 2,034 ಪ್ರಕರಣಗಳು ಮತ್ತು ಹರಿದ್ವಾರ 1,002 ಕೇಸ್ಗಳು ದಾಖಲಾಗಿವೆ.