ನವದೆಹಲಿ: ಎಡಕ್ಕರ ಮಾವೋವಾದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ (ರಾಷ್ಟ್ರೀಯ ತನಿಖಾ ದಳ-NIA) ಕೇರಳ, ಕರ್ನಾಟಕ, ತಮಿಳುನಾಡಿನ 20 ಸ್ಥಳಗಳಲ್ಲಿ ಚುರುಕಿನ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
2016 ರ ಸೆಪ್ಟೆಂಬರ್ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಪಿಐ (ಮಾವೋವಾದಿ) ಕೇರಳದ ನಿಲಂಬೂರು ಅರಣ್ಯ ಪ್ರದೇಶದಲ್ಲಿ ಮಾವೋವಾದಿ ದಿನಾಚರಣೆಯನ್ನು ಆಚರಿಸಲು ಸಿದ್ಧತೆ ನಡೆಸಿತ್ತು. ಅಲ್ಲದೇ, ನಕ್ಸಲರು ತರಬೇತಿ ಶಿಬಿರ, ಶಸ್ತ್ರಾಸ್ತ್ರ ತರಬೇತಿ, ಧ್ವಜಾರೋಹಣ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಇಂದು ಎನ್ಐಎ ದಾಳಿ ನಡೆಸಿ ಶೋಧ ನಡೆಸುತ್ತಿದೆ.
ಎರಡು ವರ್ಷಗಳ ಹಿಂದೆ ಬಂಧಿಸಿದ್ದವರ ಮನೆ ಮೇಲೂ ಎನ್ಐಎ ದಾಳಿ
ಎರಡು ವರ್ಷಗಳ ಹಿಂದೆ ಮಾವೋವಾದಿಗಳಿಗೆ ಬೆಂಬಲ ನೀಡಿದ ಆರೋಪದಡಿ ಕೊಯಮತ್ತೂರಿನ ಪುಲಿಯಕುಲಂ ಪ್ರದೇಶದಲ್ಲಿ ವಾಸಿಸುತ್ತಿದ್ದ ಡಾಕ್ಟರ್ ದಿನೇಶ್ ಹಾಗೂ ಡ್ಯಾನಿಶ್ ಎಂಬುವರನ್ನು ಕೇರಳ ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆ ಇಂದು ಎನ್ಐಎ ಬಂಧಿತರ ನಿವಾಸದಲ್ಲಿ ಶೋಧ ನಡೆಸುತ್ತಿದೆ. ಜತೆಗೆ ಪೊಲ್ಲಾಚಿಯಲ್ಲಿರುವ ಸಂತೋಷ್ ಎಂಬುವರ ನಿವಾಸದ ಮೇಲೂ ರಾಷ್ಟ್ರೀಯ ತನಿಖಾ ದಳ ಶೋಧ ನಡೆಸುತ್ತಿದೆ. ಆದರೆ, ಅವರನ್ನು ಇನ್ನೂ ಬಂಧಿಸಿಲ್ಲ.