ಜೈಪುರ (ರಾಜಸ್ಥಾನ): ಕ್ಯಾನ್ಸರ್ ಗೆದ್ದು ಬರೋದು ಅಂದ್ರೆ ಅದೊಂದು ತರಹ ಮರುಹುಟ್ಟು ಪಡೆದಂತೆ. ಒಮ್ಮೆ ಈ ಮಹಾಮಾರಿ ಬಂದು ಬದುಕುಳಿದು ಬಂದರೆ ಅದೊಂದು ಪವಾಡವೇ. ಆದರೆ, ವೈದ್ಯಕೀಯ ಲೋಕದಲ್ಲೀಗ ಕ್ಯಾನ್ಸರ್ ಸಹ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಆದರೆ,ಇಂತಹ ಕಾಯಿಲೆಗೆ ಒಳಗಾದಾಗ ಪಡೆಯುವ ಚಿಕಿತ್ಸೆಯೇ ನರಕಯಾತನೆ ನೀಡುತ್ತದೆ. ಕ್ಯಾನ್ಸರ್ ಚಿಕಿತ್ಸೆಗಾಗಿ ನೀಡುವ ಕೀಮೋ ಥೆರಪಿ ರೋಗಿಗಳ ಪಾಲಿನ ಶತ್ರುವಾಗಲಿದೆ. ಈ ವೇಳೆ, ರೋಗಿ ಬಹುಮುಖ್ಯವಾಗಿ ತಲೆಕೂದಲು ಕಳೆದುಕೊಂಡು ಖಿನ್ನತೆಗೆ ಒಳಗಾಗುವ ಸಂಭವವೂ ಇದೆ.
ಆದರೆ, ಇಂತಹ ಚಿಕಿತ್ಸೆಯಿಂದ ತಲೆಕೂದಲು ಕಳೆದುಕೊಂಡು ದುಃಖಿಸುವ ಮಹಿಳೆಯರು ಹಾಗೂ ಮಕ್ಕಳಿಗೆ ಸಹಾಯ ಮಾಡಲು ಜೈಪುರದ ಒಂದು ಎನ್ಜಿಒ ಮುಂದೆ ಬಂದಿದೆ. ಈ ಸಂಸ್ಥೆಯು ಕೀಮೋ ಥೆರಪಿಗೆ ಒಳಗಾದ ಮಹಿಳೆಯರ ಪಾಲಿನ ವರದಾನವಾಗಿದೆ. ಖಾಸಗಿಯವರಿಂದ ಕೂದಲು ಪಡೆದುಕೊಂಡ ಅದನ್ನು ವಿಗ್ ಆಗಿ ಪರಿವರ್ತಿಸಿ ತಲೆ ಕೂದಲು ಕಳೆದುಕೊಂಡವರಿಗೆ ನೀಡುವ ಮಹತ್ ಕಾರ್ಯ ಮಾಡುತ್ತಿದ್ದಾರೆ.
ಇದಷ್ಟೇ ಅಲ್ಲ ಹಿಮಾಂಶಿಯ ಪುತ್ರಿ ತನ್ನ ಕೂದಲನ್ನು ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡಿದ್ದು, ಇತರರಿಗೆ ಮಾದರಿಯಾಗಿದ್ದಾಳೆ. ಆಕೆಯೂ ಸ್ವ ಇಚ್ಛೆಯಿಂದ ಈ ಅಭಿಯಾನದಲ್ಲಿ ಪಾಲ್ಗೊಂಡು ರೋಗಿಗಳಿಗೆ ನೆರವಾಗಿದ್ದಾಳೆ
ಕ್ಯಾನ್ಸರ್ನಂತಹ ರೋಗವನ್ನೂ ಹಿಮ್ಮೆಟ್ಟಿಸಿ ಬದುಕು ಕಟ್ಟಿಕೊಂಡವರು ನಮ್ಮ ನಡುವೆಯೇ ಇದ್ದಾರೆ. ಆದರೆ, ಚಿಕಿತ್ಸೆಯ ಬಳಿಕ ಅವರಲ್ಲಿ ಆತ್ಮಸ್ಥೈರ್ಯದ ಕೊರತೆ ಮಾತ್ರ ಶತ್ರುವಂತೆ ಕಾಡುತ್ತದೆ. ಇಂತಹ ಸಮಯದಲ್ಲಿ ರೋಗಿಗಳ ಮನಸ್ಥಿತಿ ಅರ್ಥ ಮಾಡಿಕೊಂಡು ಅವರ ನೆರವಿಗೆ ನಿಂತಿರುವ ಈ ಸಂಸ್ಥೆಯ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು.