ನವದೆಹಲಿ: ಮಹಾಮಾರಿ ಕೊರೊನಾ ವೈರಸ್ 2ನೇ ಅಲೆ ದೇಶದಲ್ಲಿ ಮೀತಿ ಮೀರಿದ್ದು, ಇದರಿಂದ ಜನರು ಈ ಹಿಂದಿಗಿಂತಲೂ ಅತಿ ಹೆಚ್ಚು ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಇದೇ ವಿಷಯವಾಗಿ ಕೇಂದ್ರ ಆರೋಗ್ಯ ಇಲಾಖೆ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿತು.
ಮಹಾರಾಷ್ಟ್ರ, ಪಂಜಾಬ್, ಛತ್ತೀಸ್ಗಢ, ಕರ್ನಾಟಕ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಮಹಾಮಾರಿ ಅಬ್ಬರ ಜೋರಾಗಿದ್ದು, ಮುಂದಿನ ನಾಲ್ಕು ವಾರ ಭಾರತಕ್ಕೆ ಬಹಳ ನಿರ್ಣಾಯಕವಾಗಲಿದೆ ಎಂದಿದೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದಲ್ಲಿ 10 ಜಿಲ್ಲೆಗಳಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳಿದ್ದು, ಅದರಲ್ಲಿ ಮಹಾರಾಷ್ಟ್ರದ ಏಳು ಹಾಗೂ ಕರ್ನಾಟಕ, ಛತ್ತೀಸಗಢ ಮತ್ತು ದೆಹಲಿ ತಲಾ ಒಂದು ಜಿಲ್ಲೆಯಲ್ಲಿ ಇದರ ಹಾವಳಿ ಜೋರಾಗಿದೆ ಎಂದರು. ದೇಶದಲ್ಲಿ ಅತಿ ಹೆಚ್ಚು ಆರ್ಟಿ - ಪಿಸಿಆರ್ ಟೆಸ್ಟ್ ಮಾಡಿಸುವಂತೆ ಸೂಚನೆ ನೀಡಲಾಗಿದ್ದು, ಮಹಾರಾಷ್ಟ್ರದಲ್ಲಿ ಕೇವಲ ಶೇ.60ರಷ್ಟು ಟೆಸ್ಟಿಂಗ್ ಆಗಿವೆ ಎಂದರು. ಪಂಜಾಬ್ ಹಾಗೂ ಛತ್ತೀಸ್ಗಢದಲ್ಲಿ ಹೆಚ್ಚಿನ ಸಾವು ಪ್ರಕರಣ ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.
ನಿನ್ನೆ ಒಂದೇ ದಿನ ದೇಶಾದ್ಯಂತ 43 ಲಕ್ಷ ಕೋವಿಡ್ ವ್ಯಾಕ್ಸಿನ್ ನೀಡಲಾಗಿದ್ದು, ಇಲ್ಲಿಯವರೆಗೆ 8.31 ಕೋಟಿ ವ್ಯಾಕ್ಸಿನ್ ನೀಡಿದ್ದೇವೆ ಎಂದರು. ವ್ಯಾಕ್ಸಿನ್ ಸುರಕ್ಷಿತವಾಗಿದ್ದು, ಇದರ ಬಗ್ಗೆ ಯಾವುದೇ ಸಂದೇಹ ಬೇಡ ಎಂಬ ಕಿವಿಮಾತು ಸಹ ಹೇಳಿದರು.
ಇದನ್ನೂ ಓದಿ: ಕೇರಳ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಪ್ರಮುಖ ಅಭ್ಯರ್ಥಿಗಳು
ಇದೇ ವೇಳೆ ಮಾತನಾಡಿದ ನೀತಿ ಆಯೋಗದ ವಿಕೆ ಪೌಲ್, ದೇಶದಲ್ಲಿ ಕೊರೊನಾ ಪ್ರಕರಣದ ಹಾವಳಿ ಹೆಚ್ಚಾಗಿದ್ದು, ನಿತ್ಯ ಅತಿ ಹೆಚ್ಚು ಸೋಂಕಿತ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ಯಾವುದೇ ಕಾರಣಕ್ಕೂ ಪರಿಸ್ಥಿತಿ ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ವಾರ್ನ್ ಮಾಡಿದ್ದಾರೆ. ಮಹಾಮಾರಿ ಹೆಚ್ಚಾಗಿರುವ ಮಹಾರಾಷ್ಟ್ರ, ಛತ್ತೀಸಗಢ ಹಾಗೂ ಪಂಜಾಬ್ದಲ್ಲಿ ಹೊಸ ವೈದ್ಯಕೀಯ ತಂಡ ರವಾನೆ ಮಾಡಲಾಗಿದ್ದು, ಅಲ್ಲಿನ ಪರಿಸ್ಥಿತಿ ಮೇಲೆ ನಿಗಾ ಇಡಲಿದ್ದಾರೆ ಎಂದರು.