ಕೋಲ್ಕತಾ : ಇದೇ ಜುಲೈ 26ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಷ್ಟ್ರೀಯ ಯೋಜನೆಗಳಿಗೆ ರೂಪವನ್ನು ನೀಡಲು ದೆಹಲಿಗೆ ಹೋದಾಗ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಟ್ವಿಟರ್‌ನಲ್ಲಿ ಅಬ್ ಕಿ ಬಾರ್ ದೀದಿ ಸರ್ಕಾರ್ (ಈ ಸಲ ದೀದಿ ಸರ್ಕಾರ) ಎಂಬುದನ್ನು ತೇಲಿ ಬಿಟ್ಟಿತ್ತು. ಇದು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಘೋಷಣೆಯಾದ ಅಬ್ ಕಿ ಬಾರ್ ಮೋದಿ ಸರ್ಕಾರ್‌ಗೆ ಟಾಂಗ್ ಕೊಡುವಂತೆ ಇತ್ತು.
ಇಂದು ದೆಹಲಿಯಿಂದ ಕೋಲ್ಕತಾಗೆ ಸಿಎಂ ಮಮತಾ ಬ್ಯಾನರ್ಜಿ ಹಿಂತಿರುಗುತ್ತಿದ್ದಂತೆ, ಟಿಎಂಸಿ ಮತ್ತೊಂದು ಘೋಷ ವಾಕ್ಯವನ್ನು ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿತ್ತು. ಪ್ರಧಾನಿ ಮೋದಿ ಅವರ ಅಚ್ಛೇ ದಿನ್(ಒಳ್ಳೆಯ ದಿನಗಳು)ಗೆ ಪ್ರತಿಯಾಗಿ ಸಚ್ಛೇ ದಿನ್ (ನಿಜವಾದ ದಿನಗಳು) ಅನ್ನು ಹರಿ ಬಿಟ್ಟಿದೆ. ಸದ್ಯ ಇದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹೊಸ ಟ್ರೆಂಡ್ ಆಗಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೇವಲ ಸುಳ್ಳು ಮತ್ತು ಹುಸಿ ಭರವಸೆಗಳಿಂದಲೇ ನಡೆಯುತ್ತಿದೆ. ಅದಕ್ಕಾಗಿಯೇ ಪ್ರಸ್ತುತ ಕೇಂದ್ರ ಸರ್ಕಾರವನ್ನು ಜುಮ್ಲಾ ಸರ್ಕಾರ ಎಂದು ಕರೆಯಲಾಗುತ್ತದೆ. ಕೇಂದ್ರ ಸರ್ಕಾರವು ಯಾವಾಗಲೂ ಸಾಧಿಸಲಾಗದ ಭರವಸೆಗಳ ನೆಪದಲ್ಲಿ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಟಿಎಂಸಿ ನಾಯಕರು ಆರೋಪಿಸಿದ್ದಾರೆ.
ನಾವು ತೃಣಮೂಲ ಕಾಂಗ್ರೆಸ್ ಪರವಾಗಿ ಸಾಧಿಸಬಹುದಾದ ಅಭಿವೃದ್ಧಿಯ ಭರವಸೆಗಳೊಂದಿಗೆ ಈ ಸುಳ್ಳನ್ನು ಎದುರಿಸಲು ಬಯಸುತ್ತೇವೆ. ನಾವು ಸುಳ್ಳನ್ನು ಹರಡಲು ಮತ್ತು ಸುಳ್ಳು ಭರವಸೆಗಳನ್ನು ನೀಡಲು ಬಯಸುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳವನ್ನು 'ಬಾಂಗ್ಲಾ' ಎಂದು ಬದಲಿಸುವಂತೆ ಮತ್ತೆ ಮೋದಿಗೆ ಮನವಿ ಸಲ್ಲಿಸಿದ 'ದೀದಿ'
ನಿನ್ನೆ ಸಂಜೆಯಿಂದ ಟಿಎಂಸಿ ಹಿರಿಯ ನಾಯಕರು ಟ್ವಿಟರ್‌ನಲ್ಲಿನ ಸಚ್ಛೇ ದಿನ್ ಪರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗಿನ ಕೇಂದ್ರ ಸರ್ಕಾರದ ಜುಮ್ಲಾಗಳನ್ನು ಹೊಡೆದು ಹಾಕುವ ಮೂಲಕ ಮಮತಾ ಬ್ಯಾನರ್ಜಿ ಅವರು ದೇಶದಲ್ಲಿ ಒಳ್ಳೆಯ ದಿನಗಳನ್ನು ತರಲಿದ್ದಾರೆ ಎಂದು ಮಾಜಿ ಸಂಸದ ಹಾಗೂ ಟಿಎಂಸಿ ನಾಯಕ ಅವಿಜಿತ್ ಮುಖರ್ಜಿ ತಿಳಿಸಿದ್ದಾರೆ. ಮಾಜಿ ರಾಷ್ಟ್ರಪತಿ ಅವರ ಪುತ್ರ ಅವಿಜಿತ್ ಮುಖರ್ಜಿ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ಬಳಿಕ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.
ಪಶ್ಚಿಮ ಬಂಗಾಳದಂತೆಯೇ ದೇಶದ ಇತರೆಡೆ ಕೃಷಿಕಬಂಧು ಯೋಜನೆಯಡಿ ರೈತರಿಗೆ 10,000 ರೂ. ನೀಡಬಹುದು. ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಆರೋಪಿಸಿದರು.