ನವದೆಹಲಿ: ವಿದ್ಯುತ್ ವಿತರಣಾ ಕಂಪನಿಗಳ ಕಾರ್ಯ ಸಾಧ್ಯತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ರವರು 2021-22ರ ಬಜೆಟ್ ಭಾಷಣದಲ್ಲಿ, ಪರಿಷ್ಕರಿಸಿದ ಸುಧಾರಣೆಗಳ ಆಧಾರಿತ ಫಲಿತಾಂಶ ಸಂಬಂಧಿತ ವಿದ್ಯುತ್ ವಿತರಣಾ ವಲಯ ಯೋಜನೆಗಾಗಿ 5 ವರ್ಷಗಳಲ್ಲಿ ರೂ.3,05,984 ಕೋಟಿಗಳನ್ನು ವಿನಿಯೋಗಿಸಲು ಪ್ರಸ್ತಾಪಿಸಿದರು. ಈ ಯೋಜನೆಯು ಮೂಲಸೌಕರ್ಯ ಸೃಷ್ಟಿಗೆ ಡಿಸ್ಕಾಮ್‌ಗಳಿಗೆ ನೆರವು ನೀಡುತ್ತದೆ, ಇದರಲ್ಲಿ ಪೂರ್ವ ಪಾವತಿಸಿದ ಸ್ಮಾರ್ಟ್ ಮೀಟರಿಂಗ್ ಮತ್ತು ಫೀಡರ್ ಬೇರ್ಪಡಿಕೆ, ವ್ಯವಸ್ಥೆಗಳ ಉನ್ನತೀಕರಣ, ಇತ್ಯಾದಿಗಳು ಸೇರಿವೆ.
ತಮ್ಮ ಬಜೆಟ್ ಭಾಷಣದಲ್ಲಿ, ಶ್ರೀಮತಿ. ಸೀತಾರಾಮನ್ ಅವರು ದೇಶಾದ್ಯಂತದ ವಿತರಣಾ ಕಂಪನಿಗಳ ಏಕಸ್ವಾಮ್ಯದತ್ತ ಗಮನ ಸೆಳೆದರು ಮತ್ತು ಒಂದಕ್ಕಿಂತ ಹೆಚ್ಚು ವಿತರಣಾ ಕಂಪನಿಗಳಲ್ಲಿ ಆಯ್ಕೆ ಮಾಡಲು ಗ್ರಾಹಕರಿಗೆ ಪರ್ಯಾಯಗಳನ್ನು ನೀಡಲು ಸ್ಪರ್ಧಾತ್ಮಕ ಚೌಕಟ್ಟನ್ನು ರೂಪಿಸಲು ಪ್ರಸ್ತಾಪಿಸಿದರು.
"ಕಳೆದ 6 ವರ್ಷಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳು ಮತ್ತು ಸಾಧನೆಗಳು ಕಂಡುಬಂದಿವೆ, ನಾವು ಸ್ಥಾಪಿತ ಸಾಮರ್ಥ್ಯದ 139 ಗಿಗಾ ವ್ಯಾಟ್ಗಳನ್ನು ಸೇರಿಸಿದ್ದೇವೆ, ಹೆಚ್ಚುವರಿ 2.8 ಕೋಟಿ ಮನೆಗಳನ್ನು ಸಂಪರ್ಕಿಸಿದ್ದೇವೆ ಮತ್ತು 1.41 ಲಕ್ಷ ಸರ್ಕ್ಯೂಟ್ ಕಿಮೀ ಪ್ರಸರಣ ಮಾರ್ಗಗಳನ್ನು ಸೇರಿಸಿದ್ದೇವೆ" ಎಂದು ನಿರ್ಮಲಾ ಸೀತಾರಾಮನ್ ಹೇಳಿದರು
ಹಸಿರು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ, 2020 ರ ನವೆಂಬರ್‌ನಲ್ಲಿ ಪ್ರಧಾನ ಮಂತ್ರಿಯವರು ಮಾಡಿದ ಘೋಷಣೆಯನ್ನು ಈಡೇರಿಸುವ ಮೂಲಕ ಹಸಿರು ಇಂದನ ಮೂಲಗಳಿಂದ ಹೈಡ್ರೋಜನ್ ಉತ್ಪಾದಿಸಲು 2021-22ರಲ್ಲಿ ಸಮಗ್ರ ರಾಷ್ಟ್ರೀಯ ಹೈಡ್ರೋಜನ್ ಎನರ್ಜಿ ಮಿಷನ್ ಪ್ರಾರಂಭಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದರು.