ನವದೆಹಲಿ: ಕೋವಿಡ್ ರೂಪಾಂತರಿಗಳ ಹಾವಳಿ ತಪ್ಪುವ ಸೂಚನೆ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ಕಂಡುಬಂದ ಒಮಿಕ್ರಾನ್ ಬೆನ್ನಲ್ಲೇ ಇದೀಗ ಕೊರೊನಾದ ಮತ್ತೊಂದು ತಳಿ ಪತ್ತೆಯಾಗಿದೆ. ಸೈಪ್ರಸ್ನಲ್ಲಿ ಹೊಸ ರೂಪಾಂತರಿ 'ಡೆಲ್ಟಾಕ್ರಾನ್' ಪತ್ತೆಯಾಗಿದೆ.
ಸೈಪ್ರಸ್ ವಿಶ್ವವಿದ್ಯಾಲಯದ ಜೈವಿಕ ವಿಜ್ಞಾನಗಳ ಪ್ರಾಧ್ಯಾಪಕ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಆಣ್ವಿಕ ವೈರಾಲಜಿ ಪ್ರಯೋಗಾಲಯದ ಮುಖ್ಯಸ್ಥ ಲಿಯೊಂಡಿಯೊಸ್ ಕೊಸ್ಟ್ರಿಕಿಸ್ ಪ್ರಕಾರ, ಈ ರೂಪಾಂತರಿ ಡೆಲ್ಟಾ ಮತ್ತು ಓಮಿಕ್ರಾನ್ನಲ್ಲಿರುವ ಲಕ್ಷಣಗಳನ್ನು ಹೊಂದಿದೆ. ಈ ರೂಪಾಂತರಿ ಡೆಲ್ಟಾ ಮತ್ತು ಓಮಿಕ್ರಾನ್ನ ಎರಡೂ ಲಕ್ಷಣಗಳನ್ನು ಒಳಗೊಂಡಿರುವುದರಿಂದ ಇದಕ್ಕೆ "ಡೆಲ್ಟಾಕ್ರಾನ್" ಎಂದು ಹೆಸರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಿಗೆ ಕೋವಿಡ್ ದೃಢ!
ಕೊಸ್ಟ್ರಿಕಿಸ್ ಮತ್ತು ಅವರ ತಂಡವು ಇದುವರೆಗೆ ಈ ರೂಪಾಂತರಕ್ಕೆ ಸಂಬಂಧಿಸಿದ 25 ಪ್ರಕರಣಗಳನ್ನು ಕಂಡುಹಿಡಿದಿದೆ. ಸಂಶೋಧಕರು ಈ ವಾರ ತಮ್ಮ ಫಲಿತಾಂಶಗಳನ್ನು GISAID ಗೆ ಕಳುಹಿಸಿದ್ದಾರೆ. ಇದು ವೈರಸ್‌ಗಳನ್ನು ಟ್ರ್ಯಾಕ್ ಮಾಡುವ ಅಂತಾರಾಷ್ಟ್ರೀಯ ಡೇಟಾಬೇಸ್ ಆಗಿದೆ.
ಈ ತಳಿ ಎಷ್ಟು ಅಪಾಯಕಾರಿ ಅಥವಾ ಇದು ಡೆಲ್ಟಾ ಮತ್ತು ಓಮಿಕ್ರಾನ್ಗಿಂತ ವೇಗವಾಗಿ ಹರಡುತ್ತದೆಯೇ ಎಂಬುದನ್ನು ನಾವು ಭವಿಷ್ಯದಲ್ಲಿ ನೋಡಬೇಕು ಎಂದು ಅವರು ಹೇಳಿದ್ದಾರೆ.