ನವದೆಹಲಿ : ನೀಟ್ ಪಿಜಿ ಕೌನ್ಸೆಲಿಂಗ್ ನಡೆಸಬೇಕು ಎಂದು ಆಗ್ರಹಿಸಿ ದೆಹಲಿಯಲ್ಲಿ ಕಳೆದ 11 ದಿನಗಳಿಂದ ನಡೆಯುತ್ತಿರುವ ವೈದ್ಯರ ಮುಷ್ಕರ ತೀವ್ರಗೊಂಡಿದೆ. ಇದೀಗ ನಗರದ ಸಫ್ದರ್ಗಂಜ್ ಆಸ್ಪತ್ರೆಯ ಎಲ್ಲಾ ತುರ್ತು ಸೇವೆಗಳನ್ನು ಮಂಗಳವಾರ ಬೆಳಗ್ಗೆ 8 ಗಂಟೆಯಿಂದಲೇ ಸಂಪೂರ್ಣ ಬಂದ್ ಮಾಡಲಾಗಿದೆ.
ಇದಲ್ಲದೇ ನಗರದ ಎಲ್ಲಾ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆಗಳನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ಮತ್ತು ಪ್ರತಿಭಟನಾನಿರತ ವೈದ್ಯರ ಮಧ್ಯೆ ನಡೆದ ಗಲಾಟೆಯ ವೇಳೆ ಪ್ರತಿಭಟನಾನಿರತ ವೈದ್ಯರು ಇಲ್ಲಿನ ಸರೋಜಿನಿ ನಗರ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆಗ ಇದನ್ನು ತಡೆಯಲು ಪೊಲೀಸರು ಹಲವರ ಮೇಲೆ ಲಾಠಿ ಬೀಸಿದ್ದರು. ಇದಲ್ಲದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದರು.
ಇದರಿಂದ ಕೆರಳಿದ ಪ್ರತಿಭಟನಾನಿರತ ವೈದ್ಯರು ಸಫ್ದರ್ಗಂಜ್ ಆಸ್ಪತ್ರೆಯಲ್ಲಿ ತುರ್ತು, ಒಪಿಡಿ ಸೇರಿದಂತೆ ಎಲ್ಲಾ ಸೇವೆಯನ್ನು ಬಂದ್ ಮಾಡಿ ಪ್ರತಿಭಟನೆ ಇನ್ನಷ್ಟು ತೀವ್ರಗೊಳಿಸಿದ್ದಾರೆ. ಇದಲ್ಲದೇ ಕಿರಿಯ ವೈದ್ಯರೂ ಕೂಡ ಸೇವೆಗೆ ಹಾಜರಾಗದಂತೆ ಕರಾರು ಹಾಕಿದ್ದಾರೆ.
ಇದಲ್ಲದೇ ವೈದ್ಯರನ್ನು ಥಳಿಸಿದ್ದಕ್ಕೆ ಪೊಲೀಸರು ಕ್ಷಮೆ ಕೇಳಬೇಕು. ಅಲ್ಲಿಯವರೆಗೂ ಆಸ್ಪತ್ರೆ ಸೇವೆಯನ್ನು ಮುಂದುವರಿಸಲಾಗುವುದಿಲ್ಲ ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ. ನೀಟ್ ಕೌನ್ಸೆಲಿಂಗ್ ಪ್ರಕರಣ ಇದೀಗ ಸುಪ್ರೀಂಕೋರ್ಟ್ನಲ್ಲಿದೆ.
ಇದನ್ನೂ ಓದಿ: ತಾಲಿಬಾನಿಗಳ ಕಪಿಮುಷ್ಟಿಯಲ್ಲಿ ಅಫ್ಘಾನ್ ಪ್ರಜೆಗಳು.. ಹಸಿವಿನ ಹಾಹಾಕಾರ ತೆರೆದಿಡುವ ಫೋಟೋಗಳು