ಶ್ರೀನಗರ(ಜಮ್ಮು ಕಾಶ್ಮೀರ): ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಅಕ್ರಮ ಭೂ ಕಬಳಿಕೆದಾರರ ವಿರುದ್ಧ ರಾಜ್ಯ ಕಂದಾಯ ಇಲಾಖೆಯು ಮಂಗಳವಾರ ಭೂ ಒತ್ತುವರಿ ತೆರವು ಕಾರ್ಯಾಚರಣೆ ಹಮ್ಮಿಕೊಂಡು ಬಿಸಿಮುಟ್ಟಿಸಿತು. ಅಕ್ರಮ ಭೂಮಿ ಒತ್ತುವರಿ ಆರೋಪದ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಡಾ ಫಾರೂಕ್ ಅಬ್ದುಲ್ಲಾ ಅವರ ಸಂಬಂಧಿಕರಿಗೆ ಸೇರಿದ್ದ ಶ್ರೀನಗರದಲ್ಲಿರುವ ನೆಡೋಸ್ ಗ್ರೂಪ್ ಹೊಟೇಲ್ನ್ನು ಸಹ ನೆಲಸಮಗೊಳಿಸಲಾಯಿತು. ರಾಜ್ಯ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಅಕ್ರಮ ಕಬಳಿಕೆ ಭೂಮಿಯನ್ನೂ ಪರಿಶೀಲಿಸಿದ ಬಳಿಕ ಬುಲ್ಡೋಜರ್ಗಳು ನೆಲಸಮ ಕಾರ್ಯಾಚರಣೆಗೆ ಇಳಿದವು.
ಈ ವೇಳೆ ಫಾರೂಕ್ ಅಬ್ದುಲ್ಲಾ ಅವರ ಸೋದರಳಿಯ, ಮಾಜಿ ಮುಖ್ಯಮಂತ್ರಿ ಗುಲಾಮ್ ಮುಹಮ್ಮದ್ ಶಾ ಅವರ ಪುತ್ರ ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಮುಜಾಫರ್ ಶಾ ಅವರ ಪ್ರತಿರೋಧದ ನಡುವೆಯೂ ಅಧಿಕಾರಿಗಳು ಯಾವುದನ್ನೂ ಲೆಕ್ಕಿಸದೇ ನೆಡೋಸ್ ಗ್ರೂಪ್‌ನ ಅಕ್ರಮ ಆಸ್ತಿಯನ್ನು ನೆಲಸಮಗೊಳಿಸಿ ವಶಕ್ಕೆ ಪಡೆದರು.
ಈ ವೇಳೆ, ಜಮ್ಮು ಕಾಶ್ಮೀರದ ಕಂದಾಯ ಅಧಿಕಾರಿ ಮಾತನಾಡಿ,180ಕ್ಕೂ ಹೆಚ್ಚು ಕನಲ್ ಭೂ ಪ್ರದೇಶದ ನೆಡೊ ಹೋಟೆಲ್ದ 40 ಕನಲ್ ಭೂಮಿಯನ್ನು ಶ್ರೀನಗರ ಆಡಳಿತವು ವಶಕ್ಕೆ ಪಡೆದುಕೊಂಡಿತು ಎಂದು ತಿಳಿಸಿದ್ದಾರೆ. ತಹಸೀಲ್ದಾರ್ ಅವರ ಪ್ರಕಾರ, ನೆಡೊ ಗ್ರೂಪ್ದ ಒಟ್ಟು 153 ಕನಲ್ ಜಮೀನು ಇದೆ. ಆದರೆ, ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ 40 ಕನಲ್ ಜಮೀನವೂ ರಾಜ್ಯಾಡಳಿತಕ್ಕೆ ಸೇರಿದ್ದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಶ್ರೀನಗರ ಗುಲ್ಮಾರ್ಗ್‌ನಲ್ಲಿ ನೆಡೋಸ್ ಗ್ರೂಪ್‌ನ ಆಸ್ತಿಗಳಿವೆ. ಮೌಲಾನಾ ಆಜಾದ್ ರಸ್ತೆಯ ನೆಡೋಸ ಹೋಟೆಲ್ ಹಲವಾರು ವರ್ಷಗಳಿಂದ ನಿಷ್ಕ್ರಿಯಗೊಂಡಿತು. ನೆಡೋಸ್ ಈ ಭೂಮಿಯನ್ನು ಹೋಟೆಲ್‌ಗಳನ್ನು ನಿರ್ಮಿಸಲು ಹೋಟೆಲ್‌ಗಳ ಐಟಿಸಿ ಗುಂಪುಗಳಿಗೆ ಉಪಗುತ್ತಿಗೆ ನೀಡಿತ್ತು.
ನೆಡೊ ಹೋಟೆಲ್‌ನ ಇತಿಹಾಸ: ನೆಡೋಸ್ ಹೋಟೆಲ್ ಮೈಕೆಲ್ ಆಡಮ್ ನೆಡೊ ಅವರು ಸ್ಥಾಪಿಸಿದರು. ಅವರು ವೃತ್ತಿಯಿಂದ ವಾಸ್ತುಶಿಲ್ಪಿ ಗುಜರಾತ್‌ನ ಅಂದಿನ ಮಹಾರಾಜರಿಗೆ ಅರಮನೆಯನ್ನು ನಿರ್ಮಿಸಲು ನಗರ ರಗುಸಾ (ಡುಬ್ರೊವ್ನಿಕ್) ನಿಂದ ಭಾರತಕ್ಕೆ ಪ್ರಯಾಣಿಸಿದ್ದರು. ಮೈಕೆಲ್ 1880 ರಲ್ಲಿ ಲಾಹೋರ್‌ನಲ್ಲಿ ತನ್ನ ಮೊದಲ ಹೋಟೆಲ್ ಅನ್ನು ನಿರ್ಮಿಸಿದ್ದರು. ಕಾಶ್ಮೀರದ ಸುಂದರ ಕಣಿವೆಗೆ ತನ್ನ ಹೋಟೆಲ್‌ಗಳನ್ನು ವಿಸ್ತರಿಸುವುದು ಆತನ ಕನಸಾಗಿತ್ತು. ಮೈಕೆಲ್ ಅವರು ಕಾಶ್ಮೀರದಲ್ಲಿ ಬುಡಕಟ್ಟು ಹುಡುಗಿ ಮಿರ್ಜಾನ್ ಅನ್ನು ಪ್ರೀತಿಸುತ್ತಿದ್ದರು. ನಂತರ ಅವರು ಕಾಶ್ಮೀರದಲ್ಲಿ ನೆಲೆಸಿದರು.
1933 ರಲ್ಲಿ ಮೈಕೆಲ್ ಆಡಮ್ ನೆಡೊ ಅವರ ಹಿರಿಯ ಮಗ ಮೈಕೆಲ್ ಹ್ಯಾರಿ ನೆಡೊ ಅವರ ಮಗಳು ಅಕ್ಬರ್ ಜಹಾನ್ ಅವರನ್ನು ಶೇಖ್ ಮೊಹಮ್ಮದ್ ಅಬ್ದುಲ್ಲಾ ವಿವಾಹವಾದರು. ನೆಡೊ ಅವರು ಕಣಿವೆಯಲ್ಲಿ ಎರಡು ಹೋಟೆಲ್‌ಗಳನ್ನು ನಡೆಸುತ್ತಿದ್ದರು, ಒಂದು ಶ್ರೀನಗರದಲ್ಲಿ ಮತ್ತು ಇನ್ನೊಂದು ಗುಲ್ಮಾರ್ಗ್ ಸ್ಕೀ ರೆಸಾರ್ಟ್ನಲ್ಲಿ. ಇವೆರಡನ್ನೂ 1888ರ ಸುಮಾರಿಗೆ ನಿರ್ಮಿಸಲಾಗಿದೆ.
1988-89ರಲ್ಲಿ ಹಿಮಾಲಯ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರಗಳು ಶುರುವಾಗುತ್ತಿದ್ದಂತೆ ಶ್ರೀನಗರದ ನೆಡೊ ಹೋಟೆಲ್ನ್ನೂ ಮುಚ್ಚಲಾಗಿತ್ತು. ಗುಲ್ಮಾರ್ಗ್ ಹೋಟೆಲ್ ಕಾರ್ಯನಿರ್ವಹಿಸುತ್ತಿದೆ. 1990 ರ ದಶಕದಲ್ಲಿ ಹಿಂಸಾಚಾರದ ಉತ್ತುಂಗಕ್ಕೇರುತ್ತಿದ್ದಂತೆ ಕೆಲವು ವರ್ಷಗಳ ಕಾಲ CRPF ನಿಂದ ಪಾರಂಪರಿಕ ಹೋಟೆಲ್ ಆಸ್ತಿ ಆಧೀನದಲ್ಲಿತ್ತು. ಈ ಪಾರಂಪರಿಕ ಆಸ್ತಿಯನ್ನು ಪುನರುಜ್ಜೀವನಗೊಳಿಸಲು 25 ಡೀಲಕ್ಸ್ ಕೊಠಡಿಗಳೊಂದಿಗೆ 114 ಕೊಠಡಿಗಳ ಪಂಚತಾರಾ ಹೋಟೆಲ್ ಅನ್ನು ಸ್ಥಾಪಿಸಲು ಯೋಜಿಸಿದ ಐಟಿಸಿ ಹಿಂದಿನ ವರ್ಷ ಈ ಆಸ್ತಿಯನ್ನು ದೀರ್ಘಾವಧಿ ವರೆಗೆ ಗುತ್ತಿಗೆ ಪಡೆದುಕೊಂಡಿತು.
ಇದನ್ನೂಓದಿ:ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಲಿದೆ: ನಾನೂ ಕೂಡ ಕಾತರನಾಗಿದ್ದೇನೆ; ಜಗನ್ ಘೋಷಣೆ.