ತೇಜ್‌ಪುರ್ (ಅರುಣಾಚಲ ಪ್ರದೇಶ): ಬಹುನಿರೀಕ್ಷೆಯ ನಂತರ ಪಶ್ಚಿಮ ಅರುಣಾಚಲ ಪ್ರದೇಶದ ಕಮೆಂಗ್ ಜಿಲ್ಲೆಯಲ್ಲಿ ನೆಚಿಫು ಸುರಂಗದ ನಿರ್ಮಾಣ ಕಾರ್ಯವು ಕೊನೆಗೂ ಪೂರ್ಣಗೊಂಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಂಬರುವ ಮೇ ತಿಂಗಳಲ್ಲಿ ಈ ಸುರಂಗ ಮಾರ್ಗಕ್ಕೆ ಹಸಿರು ನಿಶಾನೆ ತೋರುವ ಸಾಧ್ಯತೆ ದಟ್ಟವಾಗಿದೆ.
ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ನ ಪ್ರಾಜೆಕ್ಟ್ ವರ್ತಕ್: ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ನ ಪ್ರಾಜೆಕ್ಟ್ ವರ್ತಕ್, ಅರುಣಾಚಲ ಪ್ರದೇಶದ ಬಲಿಪರಾ - ಚರಿದುವಾರ್ - ತವಾಂಗ್ ಅನ್ನು ಭಾರತ-ಚೀನಾ ಗಡಿಗೆ ಸಂಪರ್ಕಿಸುವ ಎನ್ಎಚ್-218ನಲ್ಲಿ ಎರಡು ಸುರಂಗಗಳ ನಿರ್ಮಾಣದ ಜವಾಬ್ದಾರಿ ಹೊಂದಿದೆ. ಪಶ್ಚಿಮ ಅರುಣಾಚಲ ಪ್ರದೇಶಕ್ಕೆ ಜವಾಬ್ದಾರರಾಗಿರುವ ತೇಜ್‌ಪುರದ ಪ್ರಾಜೆಕ್ಟ್ ವರ್ತಕ್ನ ಮುಖ್ಯ ಇಂಜಿನಿಯರ್ ಬ್ರಿಗೇಡಿಯರ್ ರಮಣ್ ಕುಮಾರ್ ಅವರೊಂದಿಗೆ ಈಟಿವಿ ಭಾರತ್‌ನ ವಿಶೇಷ ಸಂದರ್ಶನ ಇಲ್ಲಿದೆ ನೋಡಿ.
ಸುರಂಗಗಳ ಅಡಿಪಾಯ ಹಾಕಿದ್ದು ಪ್ರಧಾನಿ ಮೋದಿ: ಗಡಿಯ ಅತ್ಯಂತ ಸೂಕ್ಷ್ಮ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 2019ರಲ್ಲಿ ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಿಂದ ದೂರದಲ್ಲಿ ಸುರಂಗಗಳ ಅಡಿಪಾಯವನ್ನು ಪ್ರಧಾನಿ ನರೇಂದ್ರ ಮೋದಿ ಹಾಕಿದರು. ತವಾಂಗ್ ಜಿಲ್ಲೆಯ ಸೆಲಾ ಪಾಸ್‌ನಲ್ಲಿರುವ ಸುರಂಗವು ಎರಡು ಟ್ಯೂಬ್‌ಗಳನ್ನು ಹೊಂದಿದೆ. ಸಮುದ್ರ ಮಟ್ಟದಿಂದ 13,800 ಅಡಿ ಎತ್ತರದಲ್ಲಿ ನಿರ್ಮಿಸಲಾದ ವಿಶ್ವದ ಮೊದಲ ದ್ವಿಪಥದ ಸುರಂಗ ಇದಾಗಿದೆ.
ಎರಡು ಸುರಂಗಗಳ ಒಳಗೆ 24 ಗಂಟೆಯೂ ತುರ್ತು ಸೇವೆಗಳು: ಈ ಎರಡು ಸುರಂಗಗಳ ಒಳಗೆ, ದಿನದ 24 ಗಂಟೆಯೂ ಕೂಡಾ ತುರ್ತು ಸೇವೆಗಳು ಲಭ್ಯವಿರುತ್ತವೆ. ನೆಚಿಪು ಸುರಂಗವು 500 ಮೀಟರ್ ಉದ್ದವಿದ್ದು, ತವಾಂಗ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ದೂರವನ್ನು 7 ಕಿ.ಮೀ.ವರೆಗೆ ಕಡಿಮೆ ಮಾಡುತ್ತದೆ. ಭಾರತೀಯ ಸೇನಾ ಸಿಬ್ಬಂದಿ ಹಾಗೂ ಇತರ ಭದ್ರತಾ ಪಡೆಗಳಿಗೆ ಹಾಗೂ ಗಡಿಗೆ ತೆರಳುವ ಪ್ರವಾಸಿಗರಿಗೆ ಇದು ತುಂಬಾ ಅನುಕೂಲವಾಗಲಿದೆ.
ಅರುಣಾಚಲ ಪ್ರದೇಶದ ರಸ್ತೆಗಳಲ್ಲಿ, ವಿಶೇಷವಾಗಿ ತವಾಂಗ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಅನೇಕ ಭೂಕುಸಿತಗಳು ಮತ್ತು ಹಿಮಪಾತ ಸಂಭವಿಸುತ್ತವೆ. ಈ ಎರಡು ಸುರಂಗಗಳು ಪ್ರಸ್ತುತ ಈ ಸಮಸ್ಯೆಗಳನ್ನು ಕೊನೆಗೊಳಿಸುವ ನಿರೀಕ್ಷೆಯಿದೆ. ನೆಚಿಫು ಸುರಂಗವನ್ನು ಮೇ ತಿಂಗಳ ಆರಂಭದಲ್ಲಿ ತೆರೆಯಲಾಗುವುದು ಎಂದು ಬ್ರಿಗೇಡಿಯರ್ ರಮಣ್ ಕುಮಾರ್ ತಿಳಿಸಿದರು.
ಸೆಲಾ ಪಾಸ್‌ನಲ್ಲಿ ಮತ್ತೊಂದು ಸುರಂಗ: ಕಳೆದ ಎರಡು ವರ್ಷಗಳಲ್ಲಿ ನಡೆದ ನಿರ್ಮಾಣ ಕಾರ್ಯಗಳಿಂದ ಕೆಲವು ಸವಾಲುಗಳನ್ನು ಎದುರಿಸಿದ್ದೇವೆ. ಆದರೆ, ನಂತರ ಸವಾಲುಗಳನ್ನು ನಿರ್ಲಕ್ಷಿಸಿ, ಒಂದು ಸುರಂಗವನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲಾಯಿತು. ಸೆಲಾ ಪಾಸ್‌ನಲ್ಲಿ ಇನ್ನೊಂದು ಸುರಂಗವು ಜೂನ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
7 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಪೂರ್ಣ: ಗಡಿ ರಸ್ತೆಗಳು ತವಾಂಗ್ ಜಿಲ್ಲೆಯ ಲುಂಗ್ಲಾ ಉಪವಿಭಾಗದ ಜೆಮಿಥಾಂಗ್ ಕಂದಾಯ ವೃತ್ತದ ಅಡಿಯಲ್ಲಿ 7 ಕಿ.ಮೀ. ಉದ್ದದ ರಸ್ತೆಯ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ. ಇದು ಪವಿತ್ರ ದಲೈ ಲಾಮಾ ಅವರ ದೇಶವನ್ನು ಪ್ರವೇಶಿಸುವ ರಸ್ತೆಯಾಗಿದೆ. 1959ರಲ್ಲಿ ಚೀನಾ ಟಿಬೆಟ್ ಅನ್ನು ಆಕ್ರಮಿಸುವ ಮೊದಲು ದಲೈ ಲಾಮಾ ಭಾರತವನ್ನು ಪ್ರವೇಶಿಸಿದರು ಎಂದು ಅವರು ಹೇಳಿದರು.
ಇದನ್ನೂ ಓದಿ: 20 ನಿಮಿಷಗಳವರೆಗೆ ಲೋಕಸಭೆಯಲ್ಲಿ ಆಡಿಯೋ ಮ್ಯೂಟ್: 'ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತ..' ಕಾಂಗ್ರೆಸ್ ಟೀಕೆ