ನವದೆಹಲಿ: ಕೊರೊನಾದಿಂದಾಗಿ ಪೋಷಕರಿಬ್ಬರನ್ನು ಕಳೆದುಕೊಂಡು ಅನಾಥರಾಗಿರುವ ಅಥವಾ ಒಬ್ಬ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಕುರಿತ ಮಾಹಿತಿ ನೀಡಲು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ನಿರ್ದೇಶನ ನೀಡಿದೆ.
ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಎನ್‌ಸಿಪಿಸಿಆರ್, ಬಾಲ್ ಸ್ವರಾಜ್ ಪೋರ್ಟಲ್ನಲ್ಲಿ ಮಕ್ಕಳ ಡೇಟಾವನ್ನು ಅಪ್ಲೋಡ್ ಮಾಡಲು ಸೂಚಿಸಿದೆ.
2015ರ ಮಕ್ಕಳ ಪೋಷಣೆ ಮತ್ತು ರಕ್ಷಣಾ ಕಾಯ್ದೆಯ ನಿಯಮದನುಸಾರವಾಗಿ ಅನಾಥರಾದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಬೇಕು. ಎನ್‌ಸಿಪಿಸಿಆರ್ ಪಟ್ಟಿ ಮಾಡಿದ ದಾಖಲೆಗಳನ್ನು ಒದಗಿಸಬೇಕು. ಇಂತಹ ಮಕ್ಕಳ ಹಕ್ಕನ್ನು ಎತ್ತಿಹಿಡಿಯುವುದು ಮತ್ತು ರಕ್ಷಿಸುವುದು ಅಗತ್ಯವಾಗಿದೆ ಎಂದು ಆಯೋಗ ಹೇಳಿದೆ.
ಇದನ್ನೂ ಓದಿ: ಕೊರೊನಾದಿಂದ ಪೋಷಕರ ಕಳೆದುಕೊಂಡ ಮಕ್ಕಳಿಗೆ ₹ 3 ಲಕ್ಷ ನೆರವು, ಉಚಿತ ಶಿಕ್ಷಣ- ಕೇರಳ ಸಿಎಂ ಘೋಷಣೆ
ದೇಶದಲ್ಲಿ ಉಲ್ಬಣಗೊಂಡಿರುವ ಕೋವಿಡ್ ಎರಡನೇ ಅಲೆಯಲ್ಲಿ ಅನೇಕ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇತ್ತೀಚೆಗಿನ ಸರ್ಕಾರಿ ಮೂಲಗಳ ಪ್ರಕಾರ ದೇಶಾದ್ಯಂತ ಸುಮಾರು 577 ಮಕ್ಕಳು ಅನಾಥರಾಗಿದ್ದಾರೆ. ಈ ಮಕ್ಕಳ ಆರೈಕೆಗಾಗಿ ಪ್ರತಿ ಜಿಲ್ಲೆಗೆ 10 ಲಕ್ಷ ರೂ. ನೆರವನ್ನು ಸಾಂಸ್ಥಿಕೇತರ ಮಕ್ಕಳ ಆರೈಕೆ ನಿಧಿ ಬಿಡುಗಡೆ ಮಾಡಿದೆ.
ಮೇ 21 ರಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದ ಗೃಹ ಸಚಿವಾಲಯ, ಕೋವಿಡ್ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ದುರ್ಬಲ ವರ್ಗದ ಜನರ ಹಾಗೂ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ರಕ್ಷಣೆಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿತ್ತು. ಇದಕ್ಕೆ ಸ್ಪಂದಿಸಿದ್ದ ಕೇರಳ, ದೆಹಲಿ, ಆಂಧ್ರಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಪಂಜಾಬ್ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು ಅಂತಹ ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಬೆಂಬಲವನ್ನು ನೀಡುವುದಾಗಿ ತಿಳಿಸಿವೆ.