ಮುಂಬೈ: ಬಿಜೆಪಿ ಪಕ್ಷವು ಒಂದು ವೇಳೆ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶವನ್ನು ಒಟ್ಟು ಮಾಡಿ ಒಂದು ದೇಶವನ್ನು ರಚಿಸುವುದಾದರೆ ಆ ನಿರ್ಧಾರವನ್ನು ಸ್ವಾಗತಿಸುವುದಾಗಿ ಮಹಾರಾಷ್ಟ್ರ ಕ್ಯಾಬಿನೆಟ್ ಮಂತ್ರಿ ನವಾಬ್ ಮಲಿಕ್ ಭರವಸೆ ನೀಡಿದ್ದಾರೆ.
ಭಾನುವಾರ ಮಾತನಾಡಿದ ನವಾಬ್ ಮಲಿಕ್, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿಕೆಗೆ ಈ ರೀತಿಯ ಪ್ರತಿಕ್ರಿಯೆ ನೀಡಿದರು. ಕೆಲವು ದಿನಗಳ ಹಿಂದೆ ದೇವೇಂದ್ರ ಫಡ್ನವೀಸ್ ಕರಾಚಿ ಭಾರತದ ಭಾಗವಾಗುವ ದಿನಗಳು ಬರಲಿವೆ ಎಂದಿದ್ದರು.
ಇದರ ಜೊತೆಗೆ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಒಂದೇ ದೇಶವಾಗುವ ದಿನಗಳನ್ನು ನಾವು ನೋಡಲಿದ್ದೇವೆ. ಬರ್ಲಿನ್ ಗೋಡೆಯನ್ನು ಧ್ವಂಸ ಮಾಡಿದ್ದಾರೆ ಎಂದಾದ ಮೇಲೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ವಿಲೀನ ಸಾಧ್ಯವೇಕಿಲ್ಲ. ಈ ಮೂರೂ ದೇಶಗಳು ಒಂದೇ ದೇಶವಾಗುವುದನ್ನು ಬಿಜೆಪಿ ಬಯಸುತ್ತದೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ನವಾಬ್ ಮಲಿಕ್, ಬಿಜೆಪಿ ಈ ಮೂರೂ ದೇಶಗಳನ್ನು ಒಂದು ಮಾಡುವುದಾದರೆ, ನಾವು ಬಿಜೆಪಿಗೆ ಬೆಂಬಲ ನೀಡಲು ಸಿದ್ಧವಿದ್ದೇವೆ ಎಂದಿದ್ದಾರೆ. ಇದರ ಜೊತೆಗೆ ಮುಂಬರುವ ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನಾ, ಕಾಂಗ್ರೆಸ್ ಜೊತೆಗೂಡಿ ಎನ್ಸಿಪಿ ಸರ್ಕಾರ ಮಹಾ ವಿಕಾಸ್ ಅಗಡಿ ಮೈತ್ರಿಕೂಟದಿಂದ ಸ್ಪರ್ಧೆ ಮಾಡುತ್ತದೆ ಎಂದು ಈ ವೇಳೆ ಸ್ಪಷ್ಟನೆ ನೀಡಿದರು.