ನವದೆಹಲಿ: ರಾಜಕೀಯ ಚಾಣಕ್ಯ ಎಂದು ಕರೆಯಲ್ಪಡುವ ಮಹಾರಾಷ್ಟ್ರದ ನಾಯಕ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಮತ್ತೊಂದು ಹಿನ್ನಡೆ ಅನುಭವಿಸಿದ್ದಾರೆ. ನಾಗಾಲ್ಯಾಂಡ್‌ನ ಎಲ್ಲ ಏಳೂ ಎನ್‌ಸಿಪಿ ಶಾಸಕರು ಅಜಿತ್ ಪವಾರ್ ಬಣಕ್ಕೆ ಬೆಂಬಲ ಸೂಚಿಸಿ, ಶರದ್ ಪವಾರ್ಗೆ ಶಾಕ್ ನೀಡಿದ್ದಾರೆ. ಈಶಾನ್ಯ ರಾಜ್ಯದ ಈ ಎನ್‌ಸಿಪಿ ಶಾಸಕರು ಗುರುವಾರ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ಗೆ ಬೆಂಬಲ ಸೂಚಿಸಿ ಪತ್ರ ಕಳುಹಿಸಿರುವುದಾಗಿ ನಾಗಾಲ್ಯಾಂಡ್‌ನ ಎನ್‌ಸಿಪಿ ಅಧ್ಯಕ್ಷ ವಂತುಂಗೋ ಒಡ್ಯುವೊ ಖಚಿತಪಡಿಸಿದ್ದಾರೆ.
ಅಜಿತ್ ಪವಾರ್ ಬೆಂಬಲಕ್ಕೆ ಅಗತ್ಯವಿರುವ ಪತ್ರಗಳನ್ನು ಅವರು ಹೊಂದಿದ್ದಾರೆ. ಗುರುವಾರ ಬೆಳಿಗ್ಗೆ ಅದನ್ನು 'ಹೈಕಮಾಂಡ್'ಗೆ ಸಲ್ಲಿಸಿದ್ದಾಗಿ ವಂತುಂಗೊ ಹೇಳಿದರು. ಜುಲೈ 8ರಂದು ಅಜಿತ್ ಪವಾರ್ ನೇತೃತ್ವದಲ್ಲಿ ಸುಮಾರು 30 ಶಾಸಕರು ಎನ್‌ಸಿಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ-ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು.
ಹಾಗೆಯೇ ವಿಪಕ್ಷ ನಾಯಕನ ಸ್ಥಾನಕ್ಕೆ ಅಜಿತ್ ಪವಾರ್ ರಾಜೀನಾಮೆ ನೀಡಿ, ಎಂಟು ಜನ ಬೆಂಬಲಿಗ ಶಾಸಕರೊಂದಿಗೆ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅಚ್ಚರಿಯ ನಡೆಯಿಂದ ಶರದ್ ಪವಾರ್ ಸ್ಥಾಪಿತ ಎನ್‌ಸಿಪಿ ಎರಡು ಬಣಗಳಾಗಿ ಒಡೆದಿತ್ತು. ಅಷ್ಟೇ ಅಲ್ಲ, 2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಹಾರಾಷ್ಟ್ರದ ರಾಜಕೀಯ ಚಿತ್ರಣವೇ ಬದಲಾಯಿತು.
ಅಜಿತ್ ಪವಾರ್, ಎನ್‌ಸಿಪಿ ನಾಯಕರಾದ ಪ್ರಫುಲ್ ಪಟೇಲ್, ಛಗನ್ ಭುಜಬಲ್ ಮತ್ತು ದಿಲೀಪ್ ವಾಲ್ಸೆ ಪಾಟೀಲ್ ಅವರ ಬೆಂಬಲ ಪಡೆದುಕೊಂಡು, ತಮ್ಮ ನಾಯಕತ್ವವನ್ನು 'ನಿಜವಾದ ಎನ್‌ಸಿಪಿ' ಎಂದು ಹೇಳಿಕೊಂಡರೆ, ಶರದ್ ಪವಾರ್ ಕೂಡ 'ಪಕ್ಷ ವಿರೋಧಿ ಚಟುವಟಿಕೆ'ಗಳಿಗಾಗಿ ಹಲವಾರು ನಾಯಕರನ್ನು ಹೊರಹಾಕುವ ಮೂಲಕ ತಾವೇ ಪಕ್ಷದ ಮುಖ್ಯಸ್ಥ ಎಂದು ಪ್ರತಿಪಾದಿಸಿದ್ದಾರೆ.
ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ನಡುವೆ ಹಲವು ಸಾಮ್ಯತೆಗಳಿವೆ. ಇಬ್ಬರೂ ತಮ್ಮ ಪಕ್ಷದ ಬಂಡಾಯ ನಾಯಕರಾಗಿದ್ದಾರೆ. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದ ವೇಳೆ ಶಿಂಧೆ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು. ಇದೀಗ ಅಜಿತ್ ಪವಾರ್ ಕೂಡ ಶಿಂಧೆ ಹಾದಿಯಲ್ಲಿದ್ದಾರೆ.
ಮಹಾವಿಕಾಸ್ ಅಘಾಡಿ ಸರ್ಕಾರ ಉರುಳಿಸಿದ್ದ ಶಿಂಧೆ: ಮಹಾರಾಷ್ಟ್ರದಲ್ಲಿ 2019ರ ರಾಜಕೀಯ ಬೆಳವಣಿಗೆಯಲ್ಲಿ ಶಿವಸೇನೆಯು ಬಿಜೆಪಿಯೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಿ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಮಹಾ ವಿಕಾಸ್ ಅಘಾಡಿ ಸರ್ಕಾರ ರಚಿಸಿತ್ತು. ಕಳೆದ ವರ್ಷ ಏಕನಾಥ್ ಶಿಂಧೆ ಬಣ ಅವಿಭಜಿತ ಶಿವಸೇನೆಯನ್ನು ಒಡೆದು ಬಿಜೆಪಿಯೊಂದಿಗೆ ಕೈಜೋಡಿಸಿ, ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಅಧಿಕಾರಕ್ಕೆ ಬಂದಿರುವುದನ್ನು ಇಲ್ಲಿ ನೆನಪಿಸಬಹುದು.
ಇದನ್ನೂ ಓದಿ: ’’ಮಹಾ‘‘ಅಧಿವೇಶನ: ಡೆಪ್ಯುಟಿ ಸ್ಪೀಕರ್ ವಜಾಕ್ಕೆ ಪ್ರತಿಪಕ್ಷಗಳ ಹೋರಾಟ.. ಅತ್ತ ಮೂರನೇ ಬಾರಿ ಪವಾರ್ ಭೇಟಿ ಮಾಡಿದ ಪವಾರ್!!