ರಾಯಪುರ: ಛತ್ತೀಸ್ಗಢ ಕ್ಯಾಂಕರ್ ಜಿಲ್ಲೆಯಲ್ಲಿ ಮಾವೋವಾದಿ ದಂಪತಿಗೆ ಕೊರೊನಾ ಪಾಸಿಟಿವ್ ಆಗಿದ್ದು, ವೈದ್ಯಕೀಯ ನೆರವು ಕೋರಿ ಭದ್ರತಾ ಪಡೆಗಳನ್ನು ಸಂಪರ್ಕಿಸಿದ್ದಾರೆ.
ನಕ್ಸಲ್ ಶಿಬಿರಗಳಲ್ಲಿ ಕೊರೊನಾ ಸೋಂಕು ಹರಡಿದೆ ಎಂದು ಅಧಿಕಾರಿಗಳು ಈ ಹಿಂದೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಈಗ ಮಾವೋವಾದಿಗಳ ಮೆಡ್ಕಿ ಸ್ಥಳೀಯ ಸಂಸ್ಥೆ ದಳದಲ್ಲಿ ಸಕ್ರಿಯರಾಗಿದ್ದ ಅರ್ಜುನ್ ತಟ್ಟಿ ಮತ್ತು ಅವರ ಪತ್ನಿ ಲಕ್ಷ್ಮಿ ಪಡ್ಡಾ ಅವರು ಕಾಮ್ಡೆಟಾ ಬಿಎಸ್ಎಫ್ ಶಿಬಿರದಲ್ಲಿ ಭದ್ರತಾ ಸಿಬ್ಬಂದಿ ಸಂಪರ್ಕಿಸಿ ಅನಾರೋಗ್ಯದಿಂದ ಬಳಲುತ್ತಿದ್ದೇವೆ ನಿಮ್ಮ ಸಹಾಯದ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ ಮಾಹಿತಿ ನೀಡಿದ್ದಾರೆ.
ಇಬ್ಬರಿಗೂ ಕೂಡ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆ ಮತ್ತು ಚಿಕಿತ್ಸೆಗಾಗಿ ಕ್ಯಾಂಕರ್ನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಅವರು ಚೇತರಿಸಿಕೊಂಡ ನಂತರ ಔಪಚಾರಿಕ ಶರಣಾಗತಿಯ ಪ್ರಕ್ರಿಯೆ ನಡೆಯಲಿದೆ ಎಂದು ಇದೇ ವೇಳೆ ಹೇಳಿದ್ದಾರೆ.
ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳ ದಕ್ಷಿಣ ಭಾಗದಲ್ಲಿ ಹತ್ತಕ್ಕೂ ಹೆಚ್ಚು ನಕ್ಸಲರ ಸಾವಿನ ಬಗ್ಗೆ ಮಾಹಿತಿಗಳು ಬರುತ್ತಿವೆ. ಇನ್ನೂ ಅನೇಕರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ ಎಂದು ಸುಂದರರಾಜ್ ತಿಳಿಸಿದ್ದಾರೆ.
ಈ ಹಠಾತ್ ಸಾವಿನ ಕಾರಣದ ಬಗ್ಗೆ ನಮಗೆ ಖಚಿತವಾಗಿ ತಿಳಿದಿಲ್ಲ, ಆದರೆ, ಇದು ಕೊರೊನಾ ಸೋಂಕು ಆಗಿರಬಹುದು ಎಂದು ಮೂಲ ವರದಿಗಳು ಸೂಚಿಸುತ್ತವೆ ಎಂದು ಅವರು ಹೇಳಿದರು.