ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ (Maharashtra Minister Nawab Malik's son-in-law Sameer Khan) ಅವರು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ 5 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಾರೆ ಎಂದಿರುವ ಖಾನ್, ಲಿಖಿತ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ.
ಇನ್ನು ನೋಟಿಸ್‌ಗೆ ಕಾನೂನಾತ್ಮಕವಾಗಿ ಪ್ರತಿಕ್ರಿಯಿಸುತ್ತೇವೆ ಎಂದು ರಾಜ್ಯ ಬಿಜೆಪಿ ವಕ್ತಾರರು ತಿಳಿಸಿದ್ದಾರೆ. ಹಾಗೆಯೇ ನವಾಬ್ ಮಲಿಕ್ ಅವರ ಪುತ್ರಿ ನಿಲೋಫರ್ ಮಲಿಕ್ ಖಾನ್ (Nawab Malik's daughter Nilofer Malik Khan) ಅವರು ನವೆಂಬರ್ 10 ರಂದು ನೋಟಿಸ್ನ ಸ್ನ್ಯಾಪ್‌ಶಾಟ್ ಅನ್ನು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸುಳ್ಳು ಆರೋಪಗಳು ಜೀವನವನ್ನು ಹಾಳುಮಾಡುತ್ತವೆ. ಆರೋಪಿಸುವ ಅಥವಾ ಖಂಡಿಸುವ ಮೊದಲು ಏನು ಮಾತನಾಡುತ್ತಿದ್ದೇವೆ ಎಂದು ತಿಳಿದಿರಬೇಕು. ಫಡ್ನವಿಸ್ ಅವರು ನನ್ನ ಕುಟುಂಬದ ಮೇಲೆ ಮಾಡಿರುವ ಸುಳ್ಳು ಹೇಳಿಕೆಗಳಿಗಾಗಿ ಈ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಲಾಗುತ್ತಿದೆ. ಈ ಸಂಬಂಧ ನಾವು ಹಿಂದೆ ಸರಿಯುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಈ ವರ್ಷದ ಜನವರಿಯಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಡ್ರಗ್ಸ್ ಪ್ರಕರಣದಲ್ಲಿ ಸಮೀರ್ ಖಾನ್ (Sameer Khan) ಅವರನ್ನು ಬಂಧಿಸಿತ್ತು. ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ನ್ಯಾಯಾಲಯ ಅವರಿಗೆ ಸೆಪ್ಟೆಂಬರ್‌ನಲ್ಲಿ ಜಾಮೀನು ನೀಡಿತ್ತು.
ನವೆಂಬರ್ 1 ರಂದು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಫಡ್ನವಿಸ್ ಅವರು ಮಲಿಕ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಯಾರ ಮನೆಯಲ್ಲಿ ಡ್ರಗ್ಸ್ ಪತ್ತೆಯಾಗಿದೆಯೋ ಆ ಪಕ್ಷದ ಸ್ಥಿತಿಯನ್ನು ನೀವು ಊಹಿಸಬಹುದು ಎಂದಿದ್ದರು.