ಜಲಂಧರ್(ಪಂಜಾಬ್): ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು ಮೈದಾನದಲ್ಲಿ ಸಿಕ್ಸರ್ ಬಾರಿಸುವುದು, ರಾಜಕೀಯ ವೇದಿಕೆಯಲ್ಲಿ ಮಾತನಾಡುವುದು ಮತ್ತು ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಜೋರಾಗಿ ನಗುವುದು, ನಗಿಸುವುದನ್ನು ನೋಡಿದ್ದೇವೆ. ಆದರೆ, ಈಗ ಜೈಲು ವಾಸ ಅನುಭವಿಸುತ್ತಿರುವ ಸಿಧು ಹೊಸ ಹುದ್ದೆ ಪಡೆದುಕೊಂಡಿದ್ದಾರೆ.
ಪಂಜಾಬ್ ಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರೂ ಆಗಿದ್ದ ನವಜೋತ್ ಸಿಂಗ್ ಸಿಧು ತಮ್ಮ ನಿತ್ಯದ ಕೆಲಸಕ್ಕಾಗಿ ಸಲಹೆಗಾರರು ಮತ್ತು ಸಿಬ್ಬಂದಿಯ ಸೈನ್ಯವನ್ನೇ ಹೊಂದಿದ್ದರು. ಇದೀಗ ಜೈಲಿನೊಳಗಿರುವ ಅವರು ಜೈಲಿನ ಕಡತಗಳ ಖಾತೆಯನ್ನು ನೋಡಿಕೊಳ್ಳುವ ಗುಮಾಸ್ತನ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ರೋಡ್ ರೇಜ್ ಪ್ರಕರಣದಲ್ಲಿ 1 ವರ್ಷ ಜೈಲು ಶಿಕ್ಷೆ: ಕೋರ್ಟ್ಗೆ ಶರಣಾದ ನವಜೋತ್ ಸಿಂಗ್ ಸಿಧು
34 ವರ್ಷದ ಹಿಂದಿನ ರಸ್ತೆ ಅಪಘಾತ ಪ್ರಕರಣದಲ್ಲಿ ಸಿಧುಗೆ ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೈಲಿನಲ್ಲಿ ಸಿಧು ಅರ್ಹತೆ ಮತ್ತು ಶಿಕ್ಷಣಕ್ಕೆ ಅನುಗುಣವಾಗಿ ಕೆಲಸವನ್ನು ನೀಡಲಾಗಿದೆ. ಇದಕ್ಕಾಗಿ ಅವರು ತಮ್ಮ ಬ್ಯಾರಕ್‌ನಿಂದ ಹೊರಬರಬೇಕಾಗಿಲ್ಲ. ಆದರೆ, ಅವರ ಕೆಲಸಕ್ಕೆ ಸಂಬಂಧಿಸಿದ ಎಲ್ಲ ಫೈಲ್‌ಗಳನ್ನು ಅವರ ಬ್ಯಾರಕ್‌ಗೆ ಕಳುಹಿಸಲಾಗುತ್ತದೆ. ಒಂದು ದಿನದಲ್ಲಿ ಎಷ್ಟು ಕೆಲಸ ಮಾಡಲಬಲ್ಲರು ಎಂಬುದರ ಮೇಲೆ ಕಡತಗಳ ರವಾನೆ ಅವಲಂಬಿತವಾಗಿರುತ್ತದೆ ಎಂದು ಪಟಿಯಾಲ ಜೈಲಿನ ಅಧಿಕಾರಿ ಮನ್ಜೀತ್ ಸಿಂಗ್ ತಿವಾನಾ ಮಾಹಿತಿ ನೀಡಿದ್ದಾರೆ.
ಮೂರು ತಿಂಗಳ ತರಬೇತಿ: ಮತ್ತೊಬ್ಬ ಜೈಲು ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಸಿಧು ಕ್ಲರ್ಕ್ ಕೆಲಸದಲ್ಲಿ ಇನ್ನೂ ಪರಿಣಿತರಲ್ಲ. ಹೀಗಾಗಿ ಮೊದಲ ಮೂರು ತಿಂಗಳವರೆಗೆ ಅವರನ್ನು ಟ್ರೈನಿಯಾಗಿ ಉಳಿಸಿಕೊಳ್ಳಲಾಗುತ್ತದೆ. ಅದರಲ್ಲಿ ಅವರಿಗೆ ವೇತನ ಸಿಗುವುದಿಲ್ಲ. ಈ ಮೊದಲು ಅವರಿಗೆ ಜೈಲಿನೊಳಗೆ ಕಾರ್ಖಾನೆ ಅಥವಾ ಪೀಠೋಪಕರಣಗಳ ಕೆಲಸವನ್ನು ನೀಡುವ ನಿರೀಕ್ಷೆ ಇದೆ. ಆದರೆ, ಅರ್ಹತೆ ಮತ್ತು ಶಿಕ್ಷಣದ ಜೊತೆಗೆ ಅವರ ಸುರಕ್ಷತೆಯ ಕಾರಣ ಈ ಕೆಲಸದಿಂದ ದೂರ ಇಡಲಾಗಿದೆ.
ಇದನ್ನೂ ಓದಿ: 'ಕೈ' ಬಿಟ್ಟು ಕಪಿಲ್ ಸಿಬಲ್ 'ಸೈಕಲ್' ಬ್ಯಾಲೆನ್ಸ್!