ಥಾಣೆ, ಮಹಾರಾಷ್ಟ್ರ: ನಗರದಲ್ಲಿ ಆನ್‌ಲೈನ್ ವಂಚನೆ ಪ್ರಕರಣದಲ್ಲಿ 66 ವರ್ಷದ ವ್ಯಕ್ತಿ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಆನ್‌ಲೈನ್ ಟಾಸ್ಕ್ ಹೆಸರಿನಲ್ಲಿ ನವಿ ಮುಂಬೈನ 66 ವರ್ಷದ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು 17 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಶುಕ್ರವಾರ ನೆರೂಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏನಿದು ಪ್ರಕರಣ?: 66 ವರ್ಷದ ಸಂತ್ರಸ್ತನನ್ನು ಫೋನಿನ ಮೂಲಕ ನಾಲ್ವರು ವ್ಯಕ್ತಿಗಳು ಸಂಪರ್ಕಿಸಿದ್ದಾರೆ. ಅವರು ಆ ವೃದ್ಧನಿಗೆ ನಾವು ಪ್ರಮುಖ ಇ-ಕಾಮರ್ಸ್ ಕಂಪನಿಯ ಪ್ರತಿನಿಧಿಗಳು ಎಂದು ಹೇಳಿಕೊಂಡಿದ್ದಾರೆ. ಬಳಿಕ ನಮ್ಮ ವಿವಿಧ ಉತ್ಪನ್ನಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ರಿವಿವ್ ಅಥವಾ ವಿಮರ್ಶೆಗಳನ್ನು ಪೋಸ್ಟ್ ಮಾಡುವ ಕಾರ್ಯಕ್ಕಾಗಿ ನಾವು ಹಣ ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನಂಬಿದ ವೃದ್ಧ ಕೆಲವೊಂದು ಉತ್ಪನ್ನಗಳಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಬಳಿಕ ಈ ಕಾರ್ಯಕ್ಕೆ ಅವರು ವೃದ್ಧನ ಅಕೌಂಟ್ಗೆ ಹಣವನ್ನು ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಳಿಕ ಆ ನಾಲ್ವರು ಆರೋಪಿಗಳು ಚಾಣಕ್ಷತನದಿಂದ ವೃದ್ಧನ ಬಳಿ ಹಣ ಕಿತ್ತಿಕೊಳ್ಳಲು ಯೋಜನೆ ರೂಪಿಸಿದ್ದಾರೆ. ಇವರ ಮೇಲೆ ಭರವಸೆ ಮೂಡಿದ್ದರಿಂದ ವೃದ್ಧ ಏಪ್ರಿಲ್ ನಿಂದ ಮೇ ವರೆಗೆ ಕೆಲವೊಂದು ಕಂತುಗಳ ರೂಪದಲ್ಲಿ ಸುಮಾರು 17 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಕೆಲ ದಿನಗಳ ಬಳಿಕ ಮೋಸ ಹೋಗಿರುವುದರ ಬಗ್ಗೆ ವೃದ್ಧನಿಗೆ ಅರಿವಾಗಿದೆ. ಕೂಡಲೇ ಅವರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ವೃದ್ಧನು ನೀಡಿದ ದೂರಿನ ಆಧಾರದ ಮೇಲೆ ಅಪರಿಚಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 420 (ವಂಚನೆ) ಮತ್ತು 34 (ಸಾಮಾನ್ಯ ಉದ್ದೇಶ) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸೈಬರ್ ಅಪರಾಧಿಗಳ ಮೋಸದ ಬಲೆಗೆ ಬಲಿಯಾಗದಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು. ನಿತ್ಯ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಸೈಬರ್ ವಂಚನೆಗೆ ಒಳಗಾಗಿ ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಳ್ಳುತ್ತಿರುವ ನಿದರ್ಶನಗಳು ಆಗೊಮ್ಮೆ ಈಗೊಮ್ಮೆ ಬೆಳಕಿಗೆ ಬರುತ್ತಿವೆ. ಅಷ್ಟೇ ಅಲ್ಲ ಸೈಬರ್ ಅಪರಾಧಿಗಳನ್ನು ಬಲೆಗೆ ಕೆಡವಲು ಪೊಲೀಸರು ಸಹ ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಾಗಿದೆ.
ಓದಿ: Cyber crime: ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ರದ್ದತಿಗೆ ಪ್ರಯತ್ನಿಸಿ ₹3.5 ಲಕ್ಷ ಕಳೆದುಕೊಂಡ ಪ್ರಯಾಣಿಕ!