ಶ್ರೀನಗರ : ಲಡಾಖ್ ಸ್ಥಳೀಯಾಡಳಿತ ಸಂಸ್ಥೆಯು ತಮ್ಮ ಪಕ್ಷದ ವಿರುದ್ಧ ಪಕ್ಷಪಾತದ ಧೋರಣೆ ಅನುಸರಿಸುತ್ತಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಬಳಿಕ ಲಡಾಖ್ ಆಡಳಿತವು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಪಕ್ಷಕ್ಕೆ 'ನೇಗಿಲು' ಚಿಹ್ನೆಯನ್ನು ನೀಡಿದ ನಂತರ ಪ್ರತಿಕ್ರಿಯಿಸಿದ ಒಮರ್ ಅಬ್ದುಲ್ಲಾ, ಲಡಾಖ್ ಆಡಳಿತವು ಪಕ್ಷಪಾತದಿಂದ ಕೂಡಿದೆ ಎಂದು ಹೇಳಿದರು.
ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ನೇಗಿಲು ಚಿಹ್ನೆಯನ್ನು ನಿಗದಿಪಡಿಸಿ ಲಡಾಖ್ ಅಟಾನಾಮಸ್ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್ (ಎಲ್ಎಎಚ್ಡಿಸಿ) ಚುನಾವಣೆಯ ಹೊಸ ಅಧಿಸೂಚನೆಯನ್ನು ಹೊರಡಿಸಿದ ನಂತರ ಒಮರ್ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಈ ಚುನಾವಣೆಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ಗೆ ಅದರ ಸಾಂಪ್ರದಾಯಿಕ ಚಿಹ್ನೆಯಾಗಿದ್ದ ನೇಗಿಲು ಚಿಹ್ನೆಯನ್ನು ನೀಡಲು ಎಲ್ಎಎಚ್ಡಿಸಿ ನಿರಾಕರಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಎಲ್ಎಎಚ್ಡಿಸಿ ಯ ಈ ಚುನಾವಣಾ ಅಧಿಸೂಚನೆಯನ್ನು ರದ್ದುಗೊಳಿಸಿದ್ದು, ಈಗ ಹೊಸ ಅಧಿಸೂಚನೆ ಹೊರಡಿಸಲಾಗಿದೆ.
"ರಾಜಕೀಯ ಪಕ್ಷವಾಗಿ ನಮ್ಮ ಹಕ್ಕು ಪಡೆಯಲು ನಾವು ಇಷ್ಟೊಂದು ಸಮಯ ಕಾಯಬೇಕಾಗಿ ಬಂದಿದ್ದು ದುರದೃಷ್ಟಕರ. ಚಿಹ್ನೆಗಳ ಹಂಚಿಕೆಯ ಬಗ್ಗೆ ಚುನಾವಣಾ ಮಾರ್ಗಸೂಚಿಗಳು ಬಹಳ ಸ್ಪಷ್ಟವಾಗಿವೆ. ಆದರೆ ಲಡಾಕ್ ಆಡಳಿತವು ಬಹಳ ಪಕ್ಷಪಾತದ ಧೋರಣೆಯನ್ನು ಹೊಂದಿತ್ತು ಎಂಬುದು ಇದರಿಂದ ತಿಳಿಯುತ್ತದೆ" ಎಂದು ಒಮರ್ ಹೇಳಿದರು. ಲಡಾಖ್ ಆಡಳಿತದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಎನ್ಸಿ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲಾ, "ನಮ್ಮ ಕಾನೂನುಬದ್ಧ ಹಕ್ಕನ್ನು ನಾವು ಪಡೆದಿದ್ದೇವೆ" ಎಂದು ಹೇಳಿದರು.
ಎನ್ಸಿಗೆ ನೇಗಿಲು ಚಿಹ್ನೆ ಹಂಚಿಕೆ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕರೊಬ್ಬರು, ಇದು ದೇಶದ ಸುಪ್ರೀಂ ಕೋರ್ಟ್ನ ನಿರ್ಧಾರ ಮತ್ತು ದೇಶದ ಸುಪ್ರೀಂ ಕೋರ್ಟ್ನ ತೀರ್ಪಿನ ಮುಂದೆ ನಾವೆಲ್ಲರೂ ತಲೆ ಬಾಗಬೇಕು ಎಂದರು. ಅದೇ ಸಮಯದಲ್ಲಿ, ನಮ್ಮ ಎಲ್ಲಾ ರಾಜಕೀಯ ಪಕ್ಷಗಳು ನ್ಯಾಯಾಂಗದ ಇತರ ಪ್ರತಿಯೊಂದು ನಿರ್ಧಾರಕ್ಕೂ ಸಮಾನವಾಗಿ ಗೌರವ ಮತ್ತು ಅಧೀನರಾಗಿರಬೇಕು ಎಂದು ನಾವು ವಿನಂತಿಸುತ್ತೇವೆ ಎಂದು ಹೆಸರು ಹೇಳಲು ಬಯಸದ ಆ ಬಿಜೆಪಿ ನಾಯಕ ತಿಳಿಸಿದರು.
ಚುನಾವಣೆಗಳು ಪ್ರಜಾಪ್ರಭುತ್ವದ ಪ್ರಕ್ರಿಯೆಯಾಗಿವೆ ಮತ್ತು ಈ ಪ್ರಕ್ರಿಯೆಯು ಎಲ್ಲಾ ಪಕ್ಷಗಳಿಗೆ ಸಮಾನ ಅವಕಾಶಗಳನ್ನು ಹೊಂದಿರಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರು ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದಾರೆ. ಇತರ ಪ್ರಾದೇಶಿಕ ರಾಜಕೀಯ ಪಕ್ಷಗಳು ಈ ಬೆಳವಣಿಗೆಯ ಬಗ್ಗೆ ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ : Xನಲ್ಲಿ ಬರೆಯುವುದು 'Tweet' ಅಲ್ಲ, ಅದು 'Post'; ನಿಯಮ ಬದಲು