ಅಹಮದಾಬಾದ್ (ಗುಜರಾತ್): 2002ರ ನರೋಡಾ ಹತ್ಯಾಕಾಂಡ ಪ್ರಕರಣದಲ್ಲಿ ಬಿಜೆಪಿ ನಾಯಕಿ ಮಾಯಾ ಕೊಡ್ನಾನಿ ಮತ್ತು ಮಾಜಿ ಬಜರಂಗದಳ ನಾಯಕ ಬಾಬು ಬಜರಂಗಿ ಸೇರಿದಂತೆ ಎಲ್ಲ 67 ಆರೋಪಿಗಳನ್ನು ಗುಜರಾತ್‌ನ ವಿಶೇಷ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿ ಆದೇಶಿಸಿದೆ.
ಗೋಧ್ರಾ ಗಲಭೆ ನಂತರದ ನಡೆದ ಪ್ರಮುಖ ದಂಗೆ ಪ್ರಕರಣಗಳಲ್ಲಿ ನರೋಡಾ ಹತ್ಯಾಕಾಂಡ ಒಂದಾಗಿದ್ದು, 11 ಜನರು ಕೊಲೆಯಾಗಿತ್ತು. ಇಂದು ಈ ಪ್ರಕರಣದ ತೀರ್ಪು ಪ್ರಕಟಿಸಿರುವ ಎಸ್‌ಐಟಿ ಪ್ರಕರಣಗಳ ವಿಶೇಷ ನ್ಯಾಯಾಧೀಶರಾದ ಎಸ್.ಕೆ.ಬಾಕ್ಸಿ ಅವರು, ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ಪ್ರಕರಣದಲ್ಲಿ ಮಾಯಾ ಕೊಡ್ನಾನಿ, ಮಾಜಿ ವಿಎಚ್‌ಪಿ ನಾಯಕ ಜಯದೀಪ್ ಪಟೇಲ್ ಮತ್ತು ಮಾಜಿ ಬಜರಂಗದಳ ನಾಯಕ ಬಾಬು ಬಜರಂಗಿ ಸೇರಿ ಒಟ್ಟು 86 ಆರೋಪಿಗಳ ವಿರುದ್ಧ ಪ್ರಕರಣ ನಡೆಯುತ್ತಿತ್ತು. ಇದರಲ್ಲಿ 18 ಮಂದಿ ವಿಚಾರಣೆಯ ಬಾಕಿ ಇರುವಾಗಲೇ ಸಾವನ್ನಪ್ಪಿದ್ದರೆ, ಒಬ್ಬರನ್ನು ನ್ಯಾಯಾಲಯವು ಮೊದಲೇ ಖುಲಾಸೆಗೊಳಿಸಿತ್ತು.
ಇದನ್ನೂ ಓದಿ: SCO: ಮುಂದಿನ ತಿಂಗಳು ಭಾರತಕ್ಕೆ ಬಿಲಾವಲ್ ಭುಟ್ಟೋ; ನವಾಜ್ ಷರೀಫ್ ಬಳಿಕ ಮಹತ್ವದ ಭೇಟಿ
ಪ್ರಕರಣದ ಹಿನ್ನೆಲೆ: 2002ರ ಫೆಬ್ರವರಿ 28ರಂದು ನರೋಡಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡದಲ್ಲಿ 11 ಜನರನ್ನು ಸಜೀವವಾಗಿ ಸುಟ್ಟು ಹಾಕಲಾಗಿತ್ತು. ಅವರ ಆಸ್ತಿಗಳನ್ನು ಲೂಟಿ ಮಾಡಲಾಗಿತ್ತು. ಆಗ ಘಟನಾ ಸ್ಥಳದಲ್ಲಿದ್ದ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ತನಿಖೆ ವೇಳೆ ಹಂತ ಹಂತವಾಗಿ ಆರೋಪಿಗಳ ಸಂಖ್ಯೆ 86ಕ್ಕೆ ಏರಿಕೆಯಾಗಿತ್ತು.
2008ರಲ್ಲಿ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿತ್ತು. ಒಟ್ಟು 258 ಸಾಕ್ಷಿಗಳು ಇದ್ದು, ಇದರಲ್ಲಿ ನ್ಯಾಯಾಲಯವು 187 ಸಾಕ್ಷಿಗಳ ವಿಚಾರಣೆಯನ್ನು ಒಂದೇ ಬಾರಿಗೆ ಪೂರ್ಣಗೊಳಿಸಿತ್ತು. ಈ ಪ್ರಕರಣದಲ್ಲಿ ಸರ್ಕಾರ, ಪ್ರಾಸಿಕ್ಯೂಷನ್, ಪ್ರತಿವಾದಿಗಳು 10 ಸಾವಿರ ಪುಟಗಳ ದೋಷಾರೋಪ ಮತ್ತು 100 ಹೇಳಿಕೆಗಳನ್ನು ಉಲ್ಲೇಖಿಸಲಾಗಿತ್ತು.
ಒಟ್ಟು 86 ಆರೋಪಿಗಳನ್ನು ಪೊಲೀಸರು ಮತ್ತು ಎಸ್‌ಐಟಿ ಬಂಧಿಸಿ ವಿಚಾರಣೆ ನಡೆಸಿತ್ತು. ವಿಚಾರಣೆ ಹಂತದಲ್ಲಿ 18 ಆರೋಪಿಗಳು ಸಾವನ್ನಪ್ಪಿದ್ದರು. ಹೀಗಾಗಿ ಮೃತ ಆರೋಪಿಗಳ ಹೆಸರನ್ನು ಈ ಹಿಂದೆಯೇ ಪ್ರಕರಣದಿಂದ ಕೈಬಿಡಲಾಗಿತ್ತು. ಮತ್ತೊಬ್ಬ ಆರೋಪಿಯನ್ನು ನ್ಯಾಯಾಲಯವು ಪ್ರಕರಣದಿಂದ ಬಿಡುಗಡೆ ಮಾಡಿತ್ತು. ಕಳೆದ ಆರು ವರ್ಷಗಳಿಂದ ವಾದ-ಪ್ರತಿವಾದವನ್ನು ನ್ಯಾಯಾಲಯ ಆಲಿಸಿ, ತೀರ್ಪು ಕಾಯ್ದಿರಿಸಿತ್ತು.
ಒಂಬತ್ತು ಪ್ರಕರಣಗಳ ತನಿಖೆ: ಗೋಧ್ರಾ ಗಲಭೆ ಸೇರಿದಂತೆ ಒಟ್ಟು 9 ಪ್ರಕರಣಗಳ ತನಿಖೆಯನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿತ್ತು. ಈ ಪೈಕಿ 8 ಪ್ರಕರಣಗಳು ಮುಕ್ತಾಯವಾಗಿದೆ. ಗೋಧ್ರಾ ಗಲಭೆಯಲ್ಲಿ ರೈಲು ಬೋಗಿಗೆ ಬೆಂಕಿ ಇಟ್ಟು ಸುಟ್ಟು ಹಾಕಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿ ಫಾರೂಕ್ಗೆ ಸುಪ್ರೀಂ ಕೋರ್ಟ್ ಕಳೆದ ವರ್ಷವಷ್ಟೇ ಜಾಮೀನು ನೀಡಿತ್ತು.
ಇದನ್ನೂ ಓದಿ: ಗುಜರಾತ್ ಗೋಧ್ರಾ ಗಲಭೆ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಆರೋಪಿಗಳು ಬಿಡುಗಡೆ