ಕೊಚ್ಚಿ: ಭಾರತ ತನ್ನ ಕಡಲಾಧಾರಿತ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ ಎಂದು ಕೊಚ್ಚಿಯಲ್ಲಿ ಹಲವಾರು ಪ್ರಮುಖ ಯೋಜನೆಗಳನ್ನು ಉದ್ಘಾಟಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ವಲಯದಲ್ಲಿ ಹೆಚ್ಚಿನ ಬಂದರುಗಳ ನಿರ್ಮಾಣ, ಕಡಲಾಚೆಯ ಶಕ್ತಿ, ಸುಸ್ಥಿರ ಕರಾವಳಿ ಅಭಿವೃದ್ಧಿ ಮತ್ತು ಕರಾವಳಿ ಸಂಪರ್ಕದ ಮೂಲಸೌಕರ್ಯಗಳನ್ನು ಸುಧಾರಿಸಲು ನಮ್ಮ ದೃಷ್ಟಿ ನೆಟ್ಟಿದೆ ಎಂದಿದ್ದಾರೆ.
ಪ್ರಧಾನಿ ಅವರು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ನ ಪ್ರೊಪಿಲೀನ್ ಉತ್ಪನ್ನ ಪೆಟ್ರೋಕೆಮಿಕಲ್ ಪ್ರಾಜೆಕ್ಟ್ (ಪಿಡಿಪಿಪಿ), ಕೊಚ್ಚಿನ್‌ನ ವಿಲ್ಲಿಂಗ್ಡನ್ ದ್ವೀಪಗಳಲ್ಲಿ ರೋ-ರೋ ಹಡಗುಗಳು, ಕೊಚ್ಚಿನ್ ಬಂದರಿನಲ್ಲಿ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್ "ಸಾಗರಿಕಾ", ಸಾಗರ ಎಂಜಿನಿಯರಿಂಗ್ ತರಬೇತಿ ಸಂಸ್ಥೆ, ವಿಜಯಾನ ಸಾಗರ್, ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಮತ್ತು ಕೊಚ್ಚಿನ್ ಬಂದರಿನಲ್ಲಿ ದಕ್ಷಿಣ ಕಲ್ಲಿದ್ದಲು ಬರ್ತ್‌ನ ಪುನರ್ನಿರ್ಮಾಣದ ಕಾರ್ಯ ಸೇರಿದಂತೆ 6,100 ಕೋಟಿ ಮೌಲ್ಯದ ಯೋಜನೆಗಳಿಗೆ ಅಡಿಪಾಯ ಹಾಕಿದರು.
ಕೊಚ್ಚಿ ಸಂಸ್ಕರಣಾಗಾರದ ಪ್ರೊಪಿಲೀನ್ ಉತ್ಪನ್ನಗಳ ಪೆಟ್ರೋಕೆಮಿಕಲ್ ಸಂಕೀರ್ಣವು ಆತ್ಮನಿರ್ಭರದ ನಮ್ಮ ಪ್ರಯಾಣವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ವ್ಯಾಪಕ ಶ್ರೇಣಿಯ ಕೈಗಾರಿಕೆಗಳ ಈ ಯೋಜನೆಗಳಿಂದ ಉದ್ಯೋಗಾವಕಾಶ ಹೆಚ್ಚಾಗುತ್ತವೆ ಎಂದು ತಿಳಿಸಿದರು.
ಕೇರಳದ ಇತರ ಭಾಗಗಳಿಗೆ ಹೋಗಲು ಮಾತ್ರ ಕೊಚ್ಚಿಗೆ ಪ್ರವಾಸಿಗರು ಬರುವುದಿಲ್ಲ. ಇದೊಂದು ಆಧ್ಯಾತ್ಮಿಕ, ಮಾರುಕಟ್ಟೆ ಹಾಗೂ ಐತಿಹಾಸಿಕ ಕೇಂದ್ರವಾಗಿದೆ. ಇಲ್ಲಿ ಪ್ರವಾಸೋದ್ಯಮವನ್ನು ಸುಧಾರಿಸಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನ ಕೈಗೊಳ್ಳುತ್ತಿದೆ. ಸಾಗರಿಕಾ - ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಉದ್ಘಾಟನೆ ಇದಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದರು.
ಸಾಗರಿಕಾ ಕ್ರೂಸ್ ಟರ್ಮಿನಲ್ ಪ್ರವಾಸಿಗರಿಗೆ ಆರಾಮ ಮತ್ತು ಅನುಕೂಲತೆ ಎರಡನ್ನೂ ತರುತ್ತದೆ. ಸ್ಥಳೀಯ ಪ್ರವಾಸೋದ್ಯಮವು ಸ್ಥಳೀಯ ಜನರಿಗೆ ಜೀವನೋಪಾಯವನ್ನು ಹೆಚ್ಚಿಸಲು ಅನುಕೂಲ ಮಾಡಿಕೊಟ್ಟಿದೆ. ನಮ್ಮ ಸ್ಥಳೀಯ ಸಂಸ್ಕೃತಿಯನ್ನು ಹೆಚ್ಚಿಸುತ್ತದೆ. ನಮ್ಮ ಯುವ ಸ್ಟಾರ್ಟ್ ಅಪ್ ಸ್ನೇಹಿತರಿಗೆ ನವೀನ ಪ್ರವಾಸೋದ್ಯಮ ಸಂಬಂಧಿತ ಉತ್ಪನ್ನಗಳ ಬಗ್ಗೆ ಯೋಚಿಸುವಂತೆ ನಾನು ಕೋರುತ್ತೇನೆ ಎಂದರು.
ಕಳೆದ ಐದು ವರ್ಷಗಳಲ್ಲಿ ಭಾರತದ ಪ್ರವಾಸೋದ್ಯಮ ಕ್ಷೇತ್ರವು ಉತ್ತಮವಾಗಿ ಬೆಳೆದಿದೆ. ವಿಶ್ವ ಪ್ರವಾಸೋದ್ಯಮ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 65 ರಿಂದ 34 ನೇ ಸ್ಥಾನಕ್ಕೆ ಏರಿದೆ. ವಿಜ್ಞಾನ ಸಾಗರ್ ಕೊಚ್ಚಿ ಶಿಪ್‌ಯಾರ್ಡ್‌ನ ಹೊಸ ಜ್ಞಾನದ ಕ್ಯಾಂಪಸ್ ಆಗಿದೆ. ಇದರ ಮೂಲಕ ನಾವು ನಮ್ಮ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ವಿಸ್ತರಿಸುತ್ತಿದ್ದೇವೆ. ಈ ಕ್ಯಾಂಪಸ್ ಕೌಶಲ್ಯ ಅಭಿವೃದ್ಧಿಯ ಮಹತ್ವದ ಪ್ರತಿಬಿಂಬವಾಗಿದೆ. ಇದು ವಿಶೇಷವಾಗಿ ಸಾಗರ ಎಂಜಿನಿಯರಿಂಗ್ ಅಧ್ಯಯನ ಮಾಡಲು ಬಯಸುವವರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಮೂಲಸೌಕರ್ಯಗಳ ವ್ಯಾಖ್ಯಾನ ಮತ್ತು ವ್ಯಾಪ್ತಿ ಇಂದು ಬದಲಾಗಿದೆ. ಉತ್ತಮ ರಸ್ತೆಗಳು, ಅಭಿವೃದ್ಧಿ ಕಾರ್ಯಗಳು ಮತ್ತು ಕೆಲವು ನಗರ ಕೇಂದ್ರಗಳ ನಡುವಿನ ಸಂಪರ್ಕವನ್ನು ಮೀರಿದೆ. ಮುಂಬರುವ ಪೀಳಿಗೆಗಾಗಿ ನಾವು ಉನ್ನತ-ಗುಣಮಟ್ಟದ ಮೂಲಸೌಕರ್ಯಗಳನ್ನು ಕೊಡಬೇಕಿದೆ ಎಂದು ಹೇಳಿದರು.
ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಮೂಲಕ 110 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುತ್ತಿದೆ. ಇದರಲ್ಲಿ ಕರಾವಳಿ ಪ್ರದೇಶಗಳು, ಈಶಾನ್ಯ ಮತ್ತು ಪರ್ವತ ಪ್ರದೇಶಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಭಾರತವು ಪ್ರತಿ ಹಳ್ಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಇಂದು ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಈ ವರ್ಷದ ಬಜೆಟ್ನಲ್ಲಿ ಕೇರಳಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ನೀಡಲಾಗಿದೆ. ಇದರಲ್ಲಿ ಕೊಚ್ಚಿ ಮೆಟ್ರೊದ ಮುಂದಿನ ಹಂತವನ್ನು ಒಳಗೊಂಡಿದೆ. ಈ ಮೊದಲ ಮೆಟ್ರೋ ನೆಟ್‌ವರ್ಕ್ ಯಶಸ್ವಿಯಾಗಿ ಬಂದಿದೆ. ಇದು ಪ್ರಗತಿಪರ ಕೆಲಸದ ಹಾಗೂ ವೃತ್ತಿಪರತೆಗೆ ಉತ್ತಮ ಉದಾಹರಣೆಯಾಗಿದೆ ಎಂದು ಪ್ರಶಂಸಿಸಿದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, ರಾಜ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು. ಇದು ಕೇರಳಿಗರಿಗೆ ಒಂದು ಸಂತೋಷದ ಸಂದರ್ಭವಾಗಿದೆ. ಇಂದು ನಮ್ಮ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಯೋಜನೆಗಳು ಜೀವಂತವಾಗಿವೆ. ಹಲವಾರು ಯೋಜನೆಗಳಿಗೆ ಅಡಿಪಾಯ ಹಾಕಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಒಟ್ಟಾಗಿ ಸೇರಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂತಸ ಪಟ್ಟರು.