ಅಹಮದಾಬಾದ್: ಅಹಮದಾಬಾದ್ ಕ್ರೈಂ ಬ್ರಾಂಚ್ ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಜಂಟಿ ಕಾರ್ಯಾಚರಣೆಯಲ್ಲಿ ಕೆಮಿಕಲ್ ಇಂಜಿನಿಯರ್ ಸೇರಿದಂತೆ ಇಬ್ಬರನ್ನು ಬಂಧಿಸಿ 500 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೋಮವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರ ಇಬ್ಬರನ್ನು ಬಂಧಿಸಲಾಗಿತ್ತು. ಆರೋಪಿ ಕೆಮಿಕಲ್ ಎಂಜಿನಿಯರ್ ಸೂರತ್ ಮೂಲದವರು. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರ ಅಕ್ರಮ ಉದ್ಯಮಕ್ಕೆ ಡ್ರಗ್ ಪೂರೈಕೆಯಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಮಾದಕ ದ್ರವ್ಯಗಳು ಭಾರತದ ಪ್ರಮುಖ ನಗರಗಳಲ್ಲಿ ನಡೆಯುವ ರೇವ್ ಪಾರ್ಟಿಗಳಿಗೆ ಪೂರೈಕೆಯಾಗುತ್ತಿತ್ತು ಎಂದು ಹೇಳಿದ್ದಾರೆ.
ಗುಜರಾತ್ ಪೊಲೀಸರ ಅಪರಾಧ ವಿಭಾಗದ ಡಿಸಿಪಿ ಚೈತನ್ಯ ಮಾಂಡ್ಲಿಕ್ ಮಾತನಾಡಿ, "ಸೂರತ್ ನಿವಾಸಿಯೊಬ್ಬರು ಈ ಡ್ರಗ್ ಸಿಂಡಿಕೇಟ್ ಅನ್ನು ಸಂಘಟಿಸುತ್ತಿದ್ದಾರೆಂದು ಗುಪ್ತಚರದಿಂದ ಮಾಹಿತಿ ಬಂದ ನಂತರ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಛತ್ರಪತಿ ಸಂಭಾಜಿನಗರದಲ್ಲಿ ಸರಿಸುಮಾರು 23 ಕೆ.ಜಿ ಕೊಕೇನ್, 2.9 ಕೆ.ಜಿ ಮೆಫೆಡ್ರೋನ್ ಮತ್ತು 30 ಲಕ್ಷ ರೂ ನಗದg ವಶಕ್ಕೆ ಪಡೆಯಲಾಯಿತು. ಇಲ್ಲಿ ಸಿಕ್ಕಿರುವ ಮಾದಕ ದ್ರವ್ಯ ಮತ್ತು ಕಚ್ಚಾ ವಸ್ತುಗಳ ಮೌಲ್ಯ ಒಟ್ಟು 500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಕೆಮಿಕಲ್ ಇಂಜಿನಿಯರ್ ಜಿತೇಶ್ ಹಿನ್ಹೋರಿಯಾ ಅವರ ಹಿನ್ನೆಲೆ ಗಮನಿಸಿದಾಗ, ಆತ ಈ ಹಿಂದೆ ಫಾರ್ಮಾ ಉದ್ಯಮದಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ. ಕೆಟಮೈನ್, ಮೆಫೆಡ್ರೋನ್ ಮತ್ತು ಕೊಕೇನ್‌ನಂತಹ ಪ್ರಬಲ ಔಷಧಗಳ ಅಕ್ರಮ ತಯಾರಿಕೆಗೆ ಉದ್ದೇಶಿಸಿರುವ 23,000 ಲೀಟರ್ ರಾಸಾಯನಿಕ ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿನ್ಹೋರಿಯಾ ಸುಮಾರು 18 ತಿಂಗಳುಗಳ ಕಾಲ ಮಾದಕ ದ್ರವ್ಯಗಳ ವ್ಯಾಪಾರದಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಮೊದಲು ಛತ್ರಪತಿ ಸಂಭಾಜಿನಗರದಿಂದ ಮತ್ತು ಈಗ ಸೂರತ್‌ನಿಂದ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ವಿತರಣಾ ಜಾಲ ಮುಂಬೈ, ರತ್ಲಂ, ಇಂದೋರ್, ದೆಹಲಿ, ಚೆನ್ನೈ ಮತ್ತು ಸೂರತ್‌ನಲ್ಲಿಯೂ ವ್ಯಾಪಿಸಿದೆ ಎಂದು ತಿಳಿಸಿದ್ದಾರೆ.
ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ಪೈಥಾನ್‌ನಲ್ಲಿರುವ ಅವರ ಮಹಾಲಕ್ಷ್ಮಿ ಇಂಡಸ್ಟ್ರೀಸ್‌ವರೆಗೆ ಹೋಗಿದ್ದಾರೆ. ಅಲ್ಲಿ ಮಾದಕ ವಸ್ತುಗಳ ಅಕ್ರಮ ಉತ್ಪಾದನೆ ನಡೆಯುತ್ತಿದೆ ಎಂದು ಶಂಕಿಸಿದ್ದಾರೆ. ನಂತರ ತನಿಖೆ ಮುಂದುವರೆಸಿ 4.5 ಕೆ.ಜಿ ಮೆಫೆಡ್ರೋನ್, 4.3 .ಕೆಜಿ ಕೆಟಮೈನ್ ಮತ್ತು 9.3 ಕೆ.ಜಿ ಮೆಫೆಡ್ರೋನ್ ವಶಪಡಿಸಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ: ಬೆಂಗಳೂರು: ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 2.43 ಕೆ.ಜಿ. ತೂಕದ ಮಾದಕ ವಸ್ತು ಜಪ್ತಿ