ನಾಂದೇಡ್(ಮಹಾರಾಷ್ಟ್ರ) : ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ದಿನದ ಅಂತರದಲ್ಲಿ 31 ರೋಗಿಗಳು ಸಾವಿಗೀಡಾಗಿದ್ದು, ರಾಜ್ಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಆಸ್ಪತ್ರೆಗೆ ಹಲವು ಸಚಿವರು, ರಾಜಕಾರಣಿಗಳು ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಶಿವಸೇನಾ ಸಂಸದ (ಏಕನಾಥ್ ಶಿಂಧೆ ಬಣ) ಹೇಮಂತ್ ಪಾಟೀಲ್ ಅವರು ಆಸ್ಪತ್ರೆಯ ಅಧ್ವಾನ ಕಂಡು ಕುಪಿತರಾಗಿ, ವೈದ್ಯಾಧಿಕಾರಿಯಿಂದಲೇ ಶೌಚಾಲಯವನ್ನು ಸ್ವಚ್ಛ ಮಾಡಿಸಿದ್ದಾರೆ.
ಸಂಸದ ಹೇಮಂತ್ ಪಾಟೀಲ್ ಅವರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆವರಣದಲ್ಲಿ ಕಸದ ರಾಶಿಯನ್ನು ಕಂಡು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಶೌಚಾಲಯಗಳನ್ನು ಕಂಡಾಗ, ಅಲ್ಲಿನ ಕೊಳಕು ನೋಡಿ ಅಲ್ಲಿದ್ದ ವೈದ್ಯಾಧಿಕಾರಿಯಿಂದಲೇ ಅದನ್ನು ಸ್ವಚ್ಛ ಮಾಡಿಸಿದ್ದಾರೆ. ಸಂಸದರು ಪೈಪ್ ಹಿಡಿದು ನೀರು ಬಿಡುತ್ತಿದ್ದರೆ, ಆಸ್ಪತ್ರೆಯ ಡೀನ್ ಗಲೀಜಾಗಿದ್ದ ಟಾಯ್ಲೆಟ್ ಅನ್ನು ತೊಳೆಯುತ್ತಿರುವುದು ವಿಡಿಯೋದಲ್ಲಿದೆ.
ತಪ್ಪಿತಸ್ಥರ ವಿರುದ್ಧ ನರಹತ್ಯೆ ಕೇಸ್: ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 36 ಗಂಟೆಗಳಲ್ಲಿ 31 ರೋಗಿಗಳು ಸಾವನ್ನಪ್ಪಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಪರಿಶೀಲನೆ ವೇಳೆ ಅವ್ಯವಸ್ಥೆ ಕಂಡುಬಂದಿದೆ. ಇಲ್ಲಿನ ಶೌಚಾಲಯಗಳು ಕೊಳಕು ಸ್ಥಿತಿಯಲ್ಲಿವೆ. ಹಲವು ಶೌಚಾಲಯಗಳು ಬ್ಲಾಕ್ ಆಗಿವೆ. ಇನ್ನೂ ಕೆಲ ವಾರ್ಡ್ಗಳಲ್ಲಿ ಶೌಚಾಲಯಗಳೇ ಇಲ್ಲ. ಹೀಗಾಗಿ ರೋಗಿಗಳು ಇನ್ನಷ್ಟು ತೊಂದರೆಗೆ ಒಳಗಾಗುತ್ತಿದ್ದಾರೆ. ರೋಗಿಗಳ ಸಾವಿನ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ನರಹತ್ಯೆ ಪ್ರಕರಣ ದಾಖಲಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಸಂಸದ ಹೇಮಂತ್ ಪಾಟೀಲ್ ಹೇಳಿದರು.
ಸಮಿತಿಯಿಂದ ತನಿಖೆ ಶುರು: ಆಸ್ಪತ್ರೆಯಲ್ಲಿ ಸಾವಿನ ಕೇಕೆ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಸಮಿತಿಯನ್ನು ರಚಿಸಿದ್ದು, ಇಂದು ಆಸ್ಪತ್ರೆಗೆ ಬಂದ ಸಮಿತಿ ಸದಸ್ಯರು ತನಿಖೆ ಆರಂಭಿಸಿದ್ದಾರೆ. ಅ.1 ರಂದು 24 ತಾಸಿನಲ್ಲಿ 24 ರೋಗಿಗಳು ಸಾವನ್ನಪ್ಪಿದ್ದರು. ಇದಾದ ಬಳಿಕ ಮತ್ತೆ 7 ಮಂದಿ ಅಸುನೀಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೂ 70 ಕ್ಕೂ ಅಧಿಕ ರೋಗಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಇಲ್ಲಿನ ಚಿಕಿತ್ಸೆ ವ್ಯವಸ್ಥೆಯ ಮೇಲೆಯೇ ಅನುಮಾನ ಮೂಡಿದ್ದು, ಸಾವಿಗೆ ಕಾರಣಗಳೇನು ಎಂಬುದನ್ನು ಸಮಿತಿ ಪತ್ತೆ ಮಾಡುತ್ತಿದೆ.
ವಿಚಾರಣಾ ಸಮಿತಿಯು ಆಸ್ಪತ್ರೆಗೆ ಭೇಟಿ ನೀಡಿದ್ದು, ಆಸ್ಪತ್ರೆ ಸಿಬ್ಬಂದಿ, ಆಡಳಿತ ಮಂಡಳಿ ಅಲರ್ಟ್ ಆಗಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೆ 7 ರೋಗಿಗಳು ಸಾವು: ಎರಡು ದಿನದಲ್ಲಿ 31ಕ್ಕೆ ಏರಿಕೆಯಾದ ಮೃತರ ಸಂಖ್ಯೆ!
ಇದನ್ನೂ ಓದಿ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣಮೃದಂಗ: 24 ಗಂಟೆಯಲ್ಲಿ 12 ಶಿಶುಗಳು ಸೇರಿ 24 ರೋಗಿಗಳ ಸಾವು