ಅಮರಾವತಿ: ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ, ಮಾಜಿ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರು ಯುವಜನ ರೈತ ಶ್ರಮಿಕ ಪಾರ್ಟಿ (ವೈಎಸ್ಆರ್ಸಿಪಿ) ಸರ್ಕಾರವನ್ನು 'ಜಂಗಲ್ ರಾಜ್' ಗೆ ಹೋಲಿಸಿದ್ದಾರೆ.
ಅಲ್ಪಸಂಖ್ಯಾತ ಕುಟುಂಬದ ಆತ್ಮಹತ್ಯೆ ಜಗನ್ ರೆಡ್ಡಿ ಅವರ 'ಪೊಲೀಸ್ ರಾಜ್' ಅಡಿಯಲ್ಲಿ ಹಿಂದುಳಿದ ಸಮುದಾಯಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ತಡೆರಹಿತ ದೌರ್ಜನ್ಯಗಳ ಪರಾಕಾಷ್ಠೆಯಾಗಿದೆ ಎಂದು ನಾಯ್ಡು ದೂರಿದ್ದಾರೆ. ನಂದ್ಯಾಲ ಪೊಲೀಸರ ಕಿರುಕುಳದಿಂದಾಗಿ ಸಲಾಮ್ ಅವರ ಕುಟುಂಬವು ಶಾಂತಿಯುತ ಜೀವನ ನಡೆಸುವ ಎಲ್ಲಾ ಭರವಸೆಯನ್ನು ಕಳೆದುಕೊಂಡಿತು. ಇದರಿಂದಾಗಿ ಅವರೆಲ್ಲರೂ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಿದ್ದಾರೆ.
ಸುಳ್ಳು ಪ್ರಕರಣಗಳು ಮತ್ತು ಮೌಖಿಕ ಬೆದರಿಕೆಗಳ ರೂಪದಲ್ಲಿ ನಿರ್ದಯ ಕಿರುಕುಳವು ಮುಸ್ಲಿಂ ಕುಟುಂಬದ ಆತ್ಮಹತ್ಯೆಗೆ ಪ್ರೇರೇಪಿಸಿತು. ಪೊಲೀಸರು ಹೇಗೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರೆಂದು ಸಲಾಮ್ ಆತ್ಮಹತ್ಯೆಗೂ ಮುಂಚೆ ತಮ್ಮ ಅತ್ತೆ ಬಳಿ ಹೇಳಿಕೊಂಡಿದ್ದರು ಎಂದು ನಾಯ್ಡು ವಿವರಿಸಿದ್ದಾರೆ.
ಆಟೋರಿಕ್ಷಾ ಚಾಲನೆ ಮಾಡುವ ಮೂಲಕ ತಮ್ಮ ಜೀವನ ನಡೆಸುತ್ತಿದ್ದ ಸಲಾಮ್ ಅವರ ವಿರುದ್ಧ ಸುಳ್ಳು ಆರೋಪ ಮಾಡಿ ಜೈಲಿಗೆ ಹಾಕಲಾಗಿತ್ತು. 42 ದಿನಗಳ ನಂತರ ಜೈಲಿನಿಂದ ಹೊರಬಂದರು. ಮತ್ತೆ, ಮತ್ತೊಂದು ಸುಳ್ಳು ಪ್ರಕರಣವನ್ನು ದಾಖಲಿಸಲಾಯಿತು ಮತ್ತು ಸಲಾಮ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಅವರಿಗೆ ಕಿರುಕುಳ ನೀಡಲಾಯಿತು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಘಟನೆಗೆ ಕಾರಣರಾದ ಸರ್ಕಲ್ ಇನ್ಸ್‌ಪೆಕ್ಟರ್ ಸೋಮಶೇಖರ್ ರೆಡ್ಡಿ ಮತ್ತು ಹೆಡ್ ಕಾನ್‌ಸ್ಟೇಬಲ್ ಗಂಗಾಧರ್ ಅವರನ್ನು ವಜಾಗೊಳಿಸಬೇಕು. ಸ್ಥಳೀಯ ಡಿಎಸ್‌ಪಿಯನ್ನು ಅಮಾನತುಗೊಳಿಸಬೇಕೆಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಆಗ್ರಹಿಸಿದ್ದಾರೆ.
ಸಲಾಮ್ (45), ಅವರ ಪತ್ನಿ ನೂರ್ಜಹಾನ್ (43), ಮಗ ದಾದಾ ಖಲಂದರ್ (9) ಮತ್ತು ಮಗಳು ಸಲ್ಮಾ (14) ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಭಾನುವಾರ ಸರ್ಕಲ್ ಇನ್ಸ್‌ಪೆಕ್ಟರ್ ಸೋಮಶೇಖರ್ ರೆಡ್ಡಿ ಮತ್ತು ಹೆಡ್ ಕಾನ್‌ಸ್ಟೇಬಲ್ ಗಂಗಾಧರ್ ಅವರನ್ನು ಬಂಧಿಸಲಾಗಿದೆ. ಪೊಲೀಸರು ಕಿರುಕುಳ ನೀಡಿದ್ದಾರೆಂದು ಆರೋಪಿಸಿ ನಾಲ್ವರು ಕಳೆದ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.