ನವದೆಹಲಿ: ಅಸ್ಸೋಂನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಅಸೋಮ್ ಗಣ ಪರಿಷತ್ (ಎಜಿಪಿ) ಹಾಗೂ ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶ (ಬಿಟಿಆರ್) ಜೊತೆ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮೈತ್ರಿ ಘೋಷಿಸಲಿದ್ದಾರೆ.
ನಿನ್ನೆ ನಡ್ಡಾ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅಸ್ಸೋಂ ಬಿಜೆಪಿ ರಾಜ್ಯ ಮುಖ್ಯಸ್ಥ ರಂಜೀತ್ ಕುಮಾರ್ ದಾಸ್, ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಅಸ್ಸೋಂ ಚುನಾವಣೆಗೆ ಎಜಿಪಿ ಮತ್ತು ಬಿಟಿಆರ್ ಜೊತೆ ಮೈತ್ರಿ ಘೋಷಿಸಲಿದ್ದಾರೆ. ಮೊದಲ ಮತ್ತು ಎರಡನೇ ಹಂತದ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ನಿರ್ಧರಿಸಲಾಗಿದ್ದು, ಸಂಸದೀಯ ಮಂಡಳಿಯ ಅನುಮೋದನೆಯ ನಂತರ ಹೆಸರು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯ ಮುನ್ನ ನಿನ್ನೆ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಎಜಿಪಿ, ಬಿಟಿಆರ್ ಹಾಗೂ ಬಿಜೆಪಿ ಮುಖಂಡರ ನಿಯೋಗವು ಸಭೆ ಸೇರಿ ವಿಧಾನಸಭಾ ಚುನಾವಣೆಯ ಕಾರ್ಯತಂತ್ರಗಳ ಕುರಿತು ಚರ್ಚಿಸಿದರು.
ಇದನ್ನೂ ಓದಿ: ರಾಜಕೀಯದಲ್ಲಿ ಉಳಿಯಲು ಶಶಿಕಲಾ ಮನವೊಲಿಸುವ ಪ್ರಯತ್ನ: ಟಿಟಿವಿ ದಿನಕರನ್
ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ನೇತೃತ್ವದ ಕಾಂಗ್ರೆಸ್ನ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿ 2016ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದು ಬಿಜೆಪಿ ಇತಿಹಾಸ ಬರೆದಿತ್ತು. 126 ಸ್ಥಾನಗಳ ಪೈಕಿ ಬಿಜೆಪಿ ತನ್ನ ಮಿತ್ರ ಪಕ್ಷಗಳಾದ ಎಜಿಪಿ ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಜೊತೆ ಸೇರಿ 86 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡಿರುವ ಬಿಪಿಎಫ್, ಕಳೆದ ವಾರ ಕಾಂಗ್ರೆಸ್ ನೇತೃತ್ವದ ಏಳು ಪಕ್ಷಗಳ ಮಹಾ ಮೈತ್ರಿ 'ಮಹಾಜತ್'ಗೆ ಸೇರ್ಪಡೆಯಾಯಿತು.
ರಾಜ್ಯದಲ್ಲಿ ಮಾರ್ಚ್ 27, ಏಪ್ರಿಲ್ 1 ಹಾಗೂ ಏಪ್ರಿಲ್ 6ರಂದು ಮೂರು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಹೊರಬೀಳಲಿದೆ.