ಅಯೋಧ್ಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಯೋಧ್ಯೆಯ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಅತ್ಯಾಚಾರ ಮತ್ತು ಕೊಲೆ ಆರೋಪ ಕೇಳಿ ಬಂದಿದೆ. ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ವಿಡಿಯೋಗಳು ಹೊರಬಿದ್ದಿದೆ. ಇದರ ಜೊತೆಗೆ ಪೊಲೀಸರ ತನಿಖೆ ಕೂಡ ಚುರುಕುಗೊಂಡಿದೆ.
ಮೇ 26ರಂದು ಶಾಲೆಗೆ ರಜೆ ಇದ್ದರೂ ಸಂತ್ರಸ್ತ ವಿದ್ಯಾರ್ಥಿನಿಯನ್ನು ಶಾಲೆಗೆ ಕರೆಸಿಕೊಳ್ಳಲಾಗಿತ್ತು. ಆರಂಭದಲ್ಲಿ ಉಯ್ಯಾಲೆಯಿಂದ ಕೆಳಗೆ ಬಿದ್ದಿದ್ದಾಳೆ ಎಂದು ಆಡಳಿತ ಮಂಡಳಿಯವರು ಹೇಳಿದ್ದರು. ಆದರೆ, ಪೊಲೀಸರು ಪರಿಶೀಲನೆ ನಡೆಸಿದ ಸಿಸಿಟಿವಿ ದೃಶ್ಯಾವಳಿಯಲ್ಲಿ ವಿದ್ಯಾರ್ಥಿನಿ ಶಾಲಾ ಕಟ್ಟಡದ ಟೆರೇಸ್‌ನಿಂದ ಬಿದ್ದಿರುವುದು ಕಂಡು ಬಂದಿದೆ. ಹೀಗಾಗಿ ಇದರ ಹಿಂದೆ ಪಿತೂರಿ ಇದೆ ಎಂದು ವಿದ್ಯಾರ್ಥಿನಿಯ ಪೋಷಕರು ಶಂಕಿಸಿದ್ದಾರೆ.
ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ವ್ಯವಸ್ಥಾಪಕ ಬ್ರಿಜೇಶ್ ಯಾದವ್, ಪ್ರಾಂಶುಪಾಲರಾದ ರಶ್ಮಿ ಭಾಟಿಯಾ, ದೈಹಿಕ ಶಿಕ್ಷಕ ಅಭಿಷೇಕ್ ಕನೋಜಿಯಾ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಪೋಕ್ಸೋ ಕಾಯ್ದೆ, ಕೊಲೆ, ಸಾಕ್ಷ್ಯ ಮರೆಮಾಚುವಿಕೆ ಸೇರಿದಂತೆ ವಿವಿಧ ಗಂಭೀರ ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಂತೆಯೇ, ಬ್ರಿಜೇಶ್ ಯಾದವ್, ರಶ್ಮಿ ಭಾಟಿಯಾ, ಶಿಕ್ಷಕ ಅಭಿಷೇಕ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ವಿಡಿಯೋಗಳು ಬಯಲು: ಶಾಲೆಯಲ್ಲಿ ವಿದ್ಯಾರ್ಥಿನಿ ಸಾವಿಗೆ ಸಂಬಂಧಿಸಿದ ವಿಡಿಯೋಗಳು ಬೆಳಕಿಗೆ ಬರುತ್ತಿವೆ. ಈ ಮೊದಲು ವಿದ್ಯಾರ್ಥಿನಿ ಮಾಳಿಗೆಯಿಂದ ಕೆಳಗೆ ಬಿದ್ದಿರುವ ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿದ್ದವು. ಇದೀಗ ಮತ್ತೊಂದು ಹೊಸ ವಿಡಿಯೋ ಬಯಲಾಗಿದೆ. ಇದರಲ್ಲಿ ಮಾಳಿಗೆಯಿಂದ ಬಿದ್ದು ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿನಿಯನ್ನು ಶಾಲಾ ಉದ್ಯೋಗಿಯೊಬ್ಬರು ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಇದಲ್ಲದೇ ಶಾಲೆಯ ಶಿಕ್ಷಕರೊಬ್ಬರು ಕೂಡ ಇವರ ಹಿಂದೆ ಓಡುತ್ತಿರುವುದು ಸೆರೆಯಾಗಿದೆ.
ಸೋಮವಾರ ಎಸ್‌ಐಟಿ ತಂಡ ವಿದ್ಯಾರ್ಥಿನಿಯ ಕುಟುಂಬಸ್ಥರೊಂದಿಗೆ ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಿದೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಎಸ್‌ಐಟಿ ಸಿಸಿಟಿವಿ ದೃಶ್ಯಾವಳಿಗಳನ್ನು ಮರು ಪರಿಶೀಲಿಸಿದೆ. ಈ ವೇಳೆ, ಘಟನೆಯ ದಿನ ಶಾಲೆಯಲ್ಲಿದ್ದ 20 ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಹೇಳಿಕೆಯನ್ನು ತೆಗೆದುಕೊಂಡಿದೆ. ಇದೇ ಸಮಯದಲ್ಲಿ ವಿದ್ಯಾರ್ಥಿನಿ ಬಿದ್ದ ಸ್ಥಳದಲ್ಲಿದ್ದ ರಕ್ತದ ಕಲೆಗಳನ್ನು ಸಿಬ್ಬಂದಿ ಸ್ವಚ್ಛಗೊಳಿಸಿದ್ದು ಕಂಡು ಬಂದಿದೆ. ಮತ್ತೊಂದೆಡೆ, ವಿದ್ಯಾರ್ಥಿನಿಯ ಮೊಬೈಲ್‌ನಿಂದಲೂ ಮಹತ್ವದ ಸುಳಿವು ಸಿಗುವ ನಿರೀಕ್ಷೆ ಹೊಂದಲಾಗಿದೆ.
ಅಲ್ಲದೇ, ಘಟನೆ ನಡೆದ 15 ಗಂಟೆಗಳ ನಂತರ ಪೊಲೀಸರು ಶಾಲೆಯ ಎರಡನೇ ಮಹಡಿಯಿಂದ ಬಾಲಕಿಯ ಮೊಬೈಲ್ ಮತ್ತು ಕನ್ನಡಕವನ್ನು ವಶಪಡಿಸಿಕೊಂಡಿದ್ದಾರೆ. ಮಹಡಿಯಲ್ಲಿ ಪಾದರಕ್ಷೆಯ ಗುರುತು ಪತ್ತೆಯಾಗಿದೆ. ವಿದ್ಯಾರ್ಥಿನಿ ಶಾಲೆಯ ಮುಖ್ಯ ಗೇಟ್‌ನಿಂದ ಶಾಲೆಗೆ ಪ್ರವೇಶಿಸಿದ, ಪ್ರಾಂಶುಪಾಲರ ಕಚೇರಿಯಿಂದ ಹೊರ ಬರುವ, ಕೆಳಗೆ ಬೀಳುವ, ಎತ್ತಿಕೊಂಡು ಹೋಗುವ ಎಲ್ಲ ದೃಶ್ಯಗಳನ್ನು ಪತ್ತೆಯಾಗಿದೆ. ಹೀಗಾಗಿ ವಿದ್ಯಾರ್ಥಿನಿಯನ್ನು ಶಾಲೆಗೆ ಕರೆಸಲು ಏನಾದರೂ ಸಂಚು ನಡೆದಿದೆಯೇ?, ಇದಲ್ಲದೇ 39 ನಿಮಿಷಗಳ ಕಾಲ ಪ್ರಾಂಶುಪಾಲರೊಂದಿಗೆ ಏನು ಮಾತುಕತೆ ನಡೆದಿದೆ? ಮತ್ತು ಕೊನೆಯ ಆರು ನಿಮಿಷಗಳಲ್ಲಿ ಏನಾಯಿತು ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಎಸ್‌ಐಟಿ ನೇತೃತ್ವ ವಹಿಸಿರುವ ಸಿಒ ಸಿಟಿ ಶೈಲೇಂದ್ರ ಸಿಂಗ್ ಮಾತನಾಡಿ, ಈ ಘಟನೆ ಸಂಬಂಧ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಶಾಲೆಯ ಎಲ್ಲ ಮಹಡಿಗಳಲ್ಲಿ ತಜ್ಞರೊಂದಿಗೆ ಕೆಲವು ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದುವರೆಗೆ ತೆಗೆದ ಬೆರಳಚ್ಚುಗಳೂ ತಾಳೆಯಾಗುತ್ತಿವೆ. ಪ್ರತಿ ಹಂತದಲ್ಲೂ ಸೂಕ್ಷ್ಮವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಾಹಿಲ್ ಖಾನ್ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹುಕ್ಕಾ ಪಾರ್ಟಿ! ಗಾಯಕ ಮೂಸೆ ವಾಲಾ ಹಾಡುಗಳಿಗೆ ನೃತ್ಯ