ಅಹಮದಾಬಾದ್: ಗುಜರಾತ್ ಹೈಕೋರ್ಟ್‌ನಲ್ಲಿ ಇಂದು ವಿಶೇಷ ಪ್ರಕರಣವೊಂದು ವಿಚಾರಣೆಗೆ ಬಂತು. ಅರ್ಜಿದಾರರ ಪತಿಗೆ ಕೊರೊನಾ ಸೋಂಕು ತಗುಲಿದ್ದು, ಅವರು ಬದುಕುವ ಸಾಧ್ಯತೆ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚೆಂದರೆ 24 ಗಂಟೆ ಬದುಕಬಹುದು ಎಂದಿದ್ದಾರೆ. ಹೀಗಾಗಿ ಅವರ ಪತ್ನಿ ಐವಿಎಫ್ (In vitro fertilization) ಮೂಲಕ ಮಗುವನ್ನು ಪಡೆಯಲು ಅನುಮತಿ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ವೈದ್ಯರು ರೋಗಿಯ ವೀರ್ಯವನ್ನು ತೆಗೆದುಕೊಳ್ಳಬಹುದು ಎಂದು ನ್ಯಾಯಾಲಯವು ತೀರ್ಪು ನೀಡಿ ಅದನ್ನು ಸಂರಕ್ಷಿಸಲು ಆದೇಶಿಸಿದೆ.
ಏನಿದು ಪ್ರಕರಣ:
ನಗರದ ನಿವಾಸಿ ಅಸ್ಮಿತಾಬೆನ್ (ಹೆಸರು ಬದಲಾಯಿಸಲಾಗಿದೆ) 2020 ರ ಅಕ್ಟೋಬರ್‌ನಲ್ಲಿ ವಿವಾಹವಾದರು. ಆದರೆ, ಕೋವಿಡ್ 2ನೇ ಅಲೆಯಲ್ಲಿ ಅವರ ಪತಿ ಸುರೇಶ್‌ಭಾಯ್ (ಹೆಸರು ಬದಲಾಯಿಸಲಾಗಿದೆ) ಅವರಿಗೆ ಕೊರೊನಾ ಪಾಸಿಟಿವ್ ಬಂದು ಅವರ ಆರೋಗ್ಯ ತೀರಾ ಹದಗೆಟ್ಟಿತು. ಸುರೇಶ್‌ಭಾಯ್ ಅವರ ಬಹು ಅಂಗಗಳು ವಿಫಲವಾದವು ಮತ್ತು ವೈದ್ಯರು ಅವರು ಬದುಕುವ ಸಾಧ್ಯತೆ ಕಡಿಮೆ ಎಂದು ಕೈಚೆಲ್ಲಿದ್ದಾರೆ. ಈ ಹಿನ್ನೆಲೆ ಅಸ್ಮಿತಾಬೆನ್ ತನ್ನ ಗಂಡನ ಪ್ರೀತಿಯ ನೆನಪಿಗಾಗಿ ಐವಿಎಫ್ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಆದರೆ, ಸುರೇಶ್‌ಭಾಯ್ ಸಾವಿನ ಹಾಸಿಗೆಯ ಮೇಲೆ ಇರುವುದರಿಂದ ನಿಯಮದಂತೆ ದಾನಿಗಳ ಅಗತ್ಯವಿರುವುದರಿಂದ ವೈದ್ಯರು ಇದಕ್ಕಾಗಿ ನ್ಯಾಯಾಲಯದ ಅನುಮೋದನೆ ಪಡೆಯಲು ಸೂಚಿಸಿದ್ರು. ಈ ಪರಿಸ್ಥಿತಿಯಲ್ಲಿ ಅಸ್ಮಿತಾಬೆನ್ ಗುಜರಾತ್ ಹೈಕೋರ್ಟ್ ಮೊರೆ ಹೋದರು.. ರೋಗಿಯ ವೀರ್ಯವನ್ನು ತೆಗೆದುಕೊಳ್ಳಲು ವೈದ್ಯರು ಮುಂದುವರಿಯಬಹುದು ಎಂದು ನ್ಯಾಯಾಲಯ ತೀರ್ಪು ನೀಡಿತು ಮತ್ತು ಅದನ್ನು ಸಂರಕ್ಷಿಸಲು ಆದೇಶಿಸಿದೆ ಹಾಗೂ ಮುಂದಿನ ವಿಚಾರಣೆವರೆಗೆ ಐವಿಎಫ್ ಪ್ರಕ್ರಿಯೆಯ ಮುಂದಿನ ಹಂತ ಕೈಗೊಳ್ಳದಂತೆ ಸೂಚಿಸಿದೆ.