ಮುಂಬೈ (ಮಹಾರಾಷ್ಟ್ರ): ಕಳೆದೊಂದು ವಾರದಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಸುಪ್ರೀಂಕೋರ್ಟ್ ಅಂಗಳ ತಲುಪಿದೆ. ಬಿಜೆಪಿಯ ಮನವಿಯನ್ನು ಅನುಸರಿಸಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಮಹಾವಿಕಾಸ್ ಅಘಾಡಿ ಸರ್ಕಾರಕ್ಕೆ ನಾಳೆ ಬಹುಮತ ಸಾಬೀತು ಪಡಿಸುವಂತೆ ಆದೇಶಿಸಿದ್ದಾರೆ. ಇದರ ವಿರುದ್ಧ ಮಹಾವಿಕಾಸ್ ಅಘಾಡಿ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು ಸಂಜೆ 5 ಗಂಟೆಗೆ ಅರ್ಜಿ ವಿಚಾರಣೆ ನಡೆಯಲಿದೆ.
ಈ ಕುರಿತು ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್, ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಕಳುಹಿಸಿದ್ದಾರೆ. ಅದರಂತೆ ನಾಳೆ ವಿಶ್ವಾಸಮತ ಯಾಚನೆ ನಡೆಯಲಿದೆ. ಆದರೆ, ಇದರ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ ಎಂದು ಹೇಳಿದರು.
ಓದಿ: ರಾಜ್ಯಪಾಲರು ಸಂವಿಧಾನದ ಉಲ್ಲಂಘನೆ ಮಾಡಿದ್ದಾರೆ: ನಾವು ಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ ಎಂದ ರಾವುತ್
ಗುರುವಾರ ಬೆಳಗ್ಗೆ 11 ಗಂಟೆಗೆ ಶಿವಸೇನೆ ನೇತೃತ್ವದ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ಮಹಾರಾಷ್ಟ್ರ ಶಾಸಕಾಂಗ ಕಾರ್ಯದರ್ಶಿಗೆ ರಾಜ್ಯಪಾಲ ಕೊಶ್ಯಾರಿ ಸೂಚಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಚವಾಣ್, ಜುಲೈ 11ರವರೆಗೆ ಅನರ್ಹತೆಯ ತೀರ್ಮಾನ ಕೈಗೊಳ್ಳುವಂತಿಲ್ಲ ಎಂದು ಸೂಚಿಸಿದ ಸುಪ್ರೀಂ ಕೋರ್ಟ್ ಈ ವಿಷಯದ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ತಿಳಿಸಿದೆ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ ಮಾತನಾಡಿದರು.
ವಿಶ್ವಾಸಮತ ಯಾಚನೆಯ ರಾಜ್ಯಪಾಲರ ಪತ್ರದ ವಿರುದ್ಧ ಮಹಾವಿಕಾಸ್ ಅಘಾಡಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಿದೆ. ಉಪಸಭಾಧ್ಯಕ್ಷ (ಅಸೆಂಬ್ಲಿ) ಶಿವಸೇನಾ ಶಾಸಕಾಂಗ ಪಕ್ಷದಲ್ಲಿನ ವಿಭಜನೆಯನ್ನು ಗುರುತಿಸಬೇಕಾಗುತ್ತದೆ. ಬಂಡಾಯಗಾರರು ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ ಅನರ್ಹಗೊಳಿಸಲಾಗುವುದು ಎಂದು ಚವಾಣ್ ಹೇಳಿದರು.
ಓದಿ: ಬಹುಮತ ಸಾಬೀತಿಗೆ ರಾಜ್ಯಪಾಲರಿಂದ ಸಿಎಂಗೆ ಪತ್ರ.. ಇತ್ತ ಕಾಮಾಖ್ಯ ದೇವಿ ದರ್ಶನ ಪಡೆದ ಶಿಂದೆ
ರಾಜ್ಯಪಾಲರ ಪತ್ರದಿಂದ ಉಂಟಾದ ಪರಿಸ್ಥಿತಿಯನ್ನು ಚರ್ಚಿಸಲು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಬುಧವಾರ ಎಂವಿಎ ನಾಯಕರ ಸಭೆ ಕರೆದಿದ್ದಾರೆ. ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಶ್ವಾಸಮತ ಯಾಚನೆಗಾಗಿ ಗುರುವಾರ ಮುಂಬೈಗೆ ಆಗಮಿಸುವುದಾಗಿ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂದೆ ಬುಧವಾರ ಹೇಳಿದ್ದಾರೆ. ಇದರ ಮಧ್ಯೆ ಇಂದು ಮಧ್ಯಾಹ್ನ ಬಿಜೆಪಿ ಶಾಸಕರ ಸಭೆಯನ್ನು ದೇವೇಂದ್ರ ಫಡ್ನವೀಸ್ ಕರೆದಿದ್ದಾರೆ.