ಕೊಚ್ಚಿ: ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ನಡೆಯುವ ಅಪ್ರಾಪ್ತ ವಯಸ್ಕರ ವಿವಾಹಗಳನ್ನು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆಯಿಂದ ಹೊರಗಿಡಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ವಧು ಅಥವಾ ವರನು ಅಪ್ರಾಪ್ತ ವಯಸ್ಕನಾ(/ಳಾ)ಗಿದ್ದರೆ, ವಿವಾಹದ ಸಿಂಧುತ್ವ ಅಥವಾ ಇನ್ನಾವುದೇ ಕಾರಣಗಳನ್ನು ಲೆಕ್ಕಿಸದೆ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಅಪರಾಧಗಳು ಅನ್ವಯಿಸುತ್ತವೆ ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.
ಪೋಕ್ಸೊ ಕಾಯಿದೆಯು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಗಾಗಿ ವಿಶೇಷವಾಗಿ ಜಾರಿಗೊಳಿಸಲಾದ ವಿಶೇಷ ಶಾಸನವಾಗಿದೆ. ಯಾವುದೇ ಮಗುವಿನ ಮೇಲೆ ನಡೆಯುವ ಪ್ರತಿಯೊಂದು ಲೈಂಗಿಕ ಶೋಷಣೆಯನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಅಪರಾಧ ಕಾಯ್ದೆಯಿಂದ ಯಾವುದೇ ಮದುವೆಯನ್ನು ಹೊರಗಿಡಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಏಕ ಪೀಠ ತಿಳಿಸಿದೆ.
ಪೋಕ್ಸೊ ಕಾಯಿದೆಯು ಒಂದು ವಿಶೇಷ ಶಾಸನವಾಗಿದೆ. ಉನ್ನತ ಸಾಮಾಜಿಕ ಚಿಂತನೆಯ ಪ್ರಗತಿಯ ಕಾರಣದಿಂದ ಈ ಕಾಯ್ದೆ ರೂಪಿಸಲ್ಪಟ್ಟಿದೆ. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ನ್ಯಾಯಶಾಸ್ತ್ರದಿಂದ ಉದ್ಭವಿಸುವ ತತ್ವಗಳ ಆಧಾರದ ಮೇಲೆ ಈ ವಿಶೇಷ ಶಾಸನವನ್ನು ಜಾರಿಗೊಳಿಸಲಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ನ್ಯಾಯಶಾಸ್ತ್ರವು ದುರ್ಬಲ, ಮೋಸಕ್ಕೊಳಗಾಗುವ ಮತ್ತು ಮುಗ್ಧ ಮಕ್ಕಳನ್ನು ರಕ್ಷಿಸುವ ಅಗತ್ಯದಿಂದ ವಿಕಸನಗೊಂಡಿದೆ. ಮದುವೆ ಸೇರಿದಂತೆ ವಿವಿಧ ಮುಖವಾಡಗಳ ಅಡಿಯಲ್ಲಿ ಲೈಂಗಿಕ ಅತ್ಯಾಚಾರದಿಂದ ಮಗುವನ್ನು ರಕ್ಷಿಸುವ ಶಾಸಕಾಂಗ ಉದ್ದೇಶವು ಶಾಸನಬದ್ಧ ನಿಬಂಧನೆಗಳಿಂದ ಸ್ಪಷ್ಟವಾಗಿ ಉಲ್ಲೇಖಿಸಲ್ಪಟ್ಟಿದೆ ಎಂದು ಅವರು ಹೇಳಿದರು.
ಬಾಲ್ಯವಿವಾಹಗಳನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ ಎಂಬುದನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ಗಮನಿಸಿತು.
ಬಾಲ್ಯವಿವಾಹವು ಮಗು ತನ್ನ ಸಂಪೂರ್ಣ ಸಾಮರ್ಥ್ಯದಿಂದ ಬೆಳೆಯುವಿಕೆಯನ್ನು ಕುಂಠಿತಗೊಳಿಸುತ್ತದೆ. ಇದು ಸಮಾಜಕ್ಕೆ ಅಂಟಿದ ಶಾಪ. ಮಗುವಿನೊಂದಿಗೆ ಲೈಂಗಿಕ ಸಂಬಂಧ ಹೊಂದುವುದನ್ನು ಮತ್ತು ಮದುವೆಯ ನೆಪದಲ್ಲಿ ಮಗುವಿನೊಂದಿಗೆ ಲೈಂಗಿಕ ಸಂಬಂಧ ಹೊಂದುವುದನ್ನು ನಿಷೇಧಿಸುವುದು ಪೋಕ್ಸೊ ಕಾಯಿದೆಯ ಮೂಲ ಉದ್ದೇಶವಾಗಿದೆ. ಇದು ಸಮಾಜದ ಆಶಯವೂ ಆಗಿದೆ. ಪೋಕ್ಸೊ ಕಾಯ್ದೆಯ ಸೆಕ್ಷನ್ 2(ಡಿ) ಅಡಿಯಲ್ಲಿ ಮಗು ಎಂಬ ಪದವನ್ನು '18 ವರ್ಷ ಕೆಳಗಿನ ಯಾವುದೇ ವ್ಯಕ್ತಿ' ಎಂದು ವ್ಯಾಖ್ಯಾನಿಸಲಾಗಿದೆ ಎಂಬುದನ್ನು ಕೋರ್ಟ್ ಉಲ್ಲೇಖಿಸಿತು.
ವೈಯಕ್ತಿಕ ಕಾನೂನುಗಳು ಮತ್ತು ಸಾಂಪ್ರದಾಯಿಕ ಕಾನೂನು ಎರಡೂ ಕಾನೂನುಗಳಾಗಿವೆ. ಸೆಕ್ಷನ್ 42A ಇಂಥ ಕಾನೂನುಗಳನ್ನು ಸಹ ಅತಿಕ್ರಮಿಸಲು ಉದ್ದೇಶಿಸಿದೆ. ಆದ್ದರಿಂದ ಪೋಕ್ಸೊ ಕಾಯಿದೆ ಜಾರಿಗೆ ಬಂದ ನಂತರ, ಮಗುವಿನೊಂದಿಗೆ ಲೈಂಗಿಕ ಸಂಭೋಗ ನಡೆಸಿದ್ದು, ಅದು ವಿವಾಹದ ನೆಪದಲ್ಲಿದ್ದರೂ ಅದು ಅಪರಾಧವೇ ಆಗುತ್ತದೆ ಎಂದು ನ್ಯಾಯಾಲಯ ಹೇಳಿತು.
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪ ಹೊತ್ತಿರುವ 31 ವರ್ಷದ ಮುಸ್ಲಿಂ ಯುವಕನ ಜಾಮೀನು ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಮೇಲಿನ ಎಲ್ಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು. ತನಗೆ ಅನ್ವಯವಾಗುವ ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಾರ್ಚ್ 2021ರಲ್ಲಿ ತಾನು ಬಾಲಕಿಯನ್ನು ವಿವಾಹವಾಗಿರುವುದಾಗಿ ಆರೋಪಿ ವಾದಿಸಿದ್ದ.