ಉತ್ತರಪ್ರದೇಶ: ಇಲ್ಲಿನ ಬರೇಲಿಯಲ್ಲಿ ಮಾನಸಿಕ ಅಸ್ವಸ್ಥ ಮಗುವಿನ ಹಣೆಯ ಮೇಲೆ ವ್ಯಕ್ತಿಯೊಬ್ಬ 'ಜೈ ಭೋಲೆ' ಎಂದು ಬರೆದಿದ್ದು, ಗಲಾಟೆಗೆ ಕಾರಣವಾಗಿದೆ. ಬಳಿಕ ರಾಜೀ ಸಂಧಾನದ ನಂತರ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ. ಆದರೆ, ವ್ಯಕ್ತಿಯ ಈ ನಡೆ ಅಚ್ಚರಿ ಮೂಡಿಸಿದೆ.
ನಗರದ ವಿದ್ಯುತ್ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ವ್ಯಕ್ತಿ, ಮಾನಸಿಕವಾಗಿ ದುರ್ಬಲವಾಗಿರುವ ತಮ್ಮ ಸಂಬಂಧಿಯ ಹಣೆಯ ಮೇಲೆ ಚೂಪಾದ ವಸ್ತುವಿನಿಂದ ಜೈ ಭೋಲೆ ಎಂದು ಬರೆದಿದ್ದಾರೆ. ಇದನ್ನು ಕಂಡ ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ. ಬಳಿಕ ವಿಚಾರಿಸಿದಾಗ ತಾನೇ ಹಣೆಯ ಮೇಲೆ ಹೀಗೆ ಬರೆದಿದ್ದಾಗಿ ವ್ಯಕ್ತಿ ಹೇಳಿದ್ದಾನೆ. ಇದು ಗಲಾಟೆಗೆ ಕಾರಣವಾಗಿದೆ.
ಬರೇಲಿಯ ಪ್ರೇಮ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಯುವಕನೊಬ್ಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ಆತ ಏನನ್ನೂ ಮಾತನಾಡಲು ಅಥವಾ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಯುವಕ ತನ್ನ ಕುಟುಂಬಸ್ಥರೊಂದಿಗೆ ವಿದ್ಯುತ್ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ತನ್ನ ಸೋದರ ಸಂಬಂಧಿಯ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದಾನೆ.
ಪೊಲೀಸ್ ಠಾಣೆಯಲ್ಲಿ ಸಂಧಾನ : ಘಟನೆ 5 ದಿನಗಳ ಹಿಂದೆ ನಡೆದಿದೆ ಎಂದು ಹೇಳಲಾಗಿದೆ. ಕುಟುಂಬಸ್ಥರು ಯಾರೂ ಇಲ್ಲದಿದ್ದಾಗ ಜೂನಿಯರ್ ಇಂಜಿನಿಯರ್ ಮಾನಸಿಕ ಅಸ್ವಸ್ಥ ಯುವಕನ ಹಣೆಯ ಮೇಲೆ ಚೂಪಾದ ವಸ್ತುವನ್ನು ಬಳಸಿ ಜೈ ಭೋಲೆ ಎಂದು ಬರೆದಿದ್ದಾನೆ. ಸಂಜೆ ಮನೆಯವರು ವಾಪಸ್ ಆದಾಗ ಹಣೆಯ ಮೇಲೆ ಬರಹವನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ರೀತಿ ಯಾರು ಮಾಡಿದರು ಎಂಬುದು ಪ್ರಶ್ನೆಯಾಗಿತ್ತು. ಬಳಿಕ ಇದು ಜೂನಿಯರ್ ಎಂಜಿನಿಯರ್ ಕೃತ್ಯ ಎಂಬುದು ಗೊತ್ತಾಗಿದೆ.
ಇದರಿಂದ ಕುಪಿತಗೊಂಡ ಕುಟುಂಬಸ್ಥರು ಗಲಾಟೆ ಮಾಡಿ, ಪ್ರೇಮ್ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸಿದ್ದಾರೆ. ಬಳಿಕ ಎರಡೂ ಕಡೆಯವರನ್ನು ಠಾಣೆಗೆ ಕರೆತಂದಿದ್ದಾರೆ. ಬಳಿಕ ಜೂನಿಯರ್ ಎಂಜಿನಿಯರ್ ತನ್ನ ಕೃತ್ಯಕ್ಕಾಗಿ ಕ್ಷಮೆಯಾಚಿಸಿದ್ದಾನೆ. ಇದಾದ ಬಳಿಕ ಉಭಯ ಗುಂಪುಗಳ ನಡುವೆ ರಾಜೀ ಸಂಧಾನ ಮಾಡಲಾಗಿದೆ.
ಪ್ರೇಮ್ ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಾಜೇಶ್ ಕುಮಾರ್ ಸಿಂಗ್ ಮಾತನಾಡಿ, ಮಾನಸಿಕ ಅಸ್ವಸ್ಥ ಯುವಕನ ಹಣೆಯ ಮೇಲೆ ಆತನ ಸಂಬಂಧಿ ಜೈ ಭೋಲೆ ಎಂದು ಬರೆದಿದ್ದಾನೆ. ಎರಡೂ ಕಡೆಯವರನ್ನು ಠಾಣೆಗೆ ಕರೆತಂದು ಮಾತುಕತೆ ನಡೆಸಲಾಗಿದೆ. ಹಣೆಯ ಮೇಲೆ ಬರಹ ಕೆತ್ತಿದ ವ್ಯಕ್ತಿ ಲಿಖಿತವಾಗಿ ಕ್ಷಮಾಪಣೆ ಕೋರಿದ್ದಾನೆ. ಇದಾದ ಬಳಿಕ ಪ್ರಕರಣವನ್ನು ಇತ್ಯರ್ಥ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: 'ಸ್ಪೀಕಿಂಗ್ ಫಾರ್ ಇಂಡಿಯಾ' ಕಾರ್ಯಕ್ರಮ ಆರಂಭಿಸಿದ ತಮಿಳುನಾಡು ಸಿಎಂ ಸ್ಟಾಲಿನ್, ಮೊದಲ ಕಂತಿನ ಆಡಿಯೋ ಬಿಡುಗಡೆ