ಜುನಾಗಢ (ಗುಜರಾತ್): ಕೋಮು ಘರ್ಷಣೆಗಳ ಮಧ್ಯೆ ಇಂಥದ್ದೊಂದು ಸುದ್ದಿ ಉತ್ತಮ ಸಂದೇಶ ಸಾರುತ್ತದೆ. ಗುಜರಾತ್ನ ಜುನಾಗಢದ ಹಿಂದು ದೇವಾಲಯದಲ್ಲಿ ಮುಸ್ಲಿಂ ಜೋಡಿಯೊಂದು ನಿಕಾಹ್ ಮಾಡಿಕೊಂಡಿದೆ. ಬಡ ಕುಟುಂಬದ ವಿವಾಹಕ್ಕೆ ಸತ್ಯಂ ಸೇವಾ ಯುವಕ ಮಂಡಳಿ ಪೌರೋಹಿತ್ಯ ವಹಿಸಿದ್ದು, ಧಾರ್ಮಿಕ ಐಕ್ಯತೆಗೆ ಉತ್ತಮ ಉದಾಹರಣೆಯಾಗಿದೆ.
ಜುನಾಗಢದ ಅಖಂಡ ರಾಮ್‌ಧುನ್ ಸಂಕೀರ್ತನ ದೇವಸ್ಥಾನದಲ್ಲಿ ಈ ವಿವಾಹ ನಡೆದಿದೆ. ಇಲ್ಲಿನ ಸತ್ಯಂ ಸೇವಾ ಯುವಕ ಮಂಡಳಿ ವತಿಯಿಂದ ಮುಸ್ಲಿಂ ಕುಟುಂಬದ ಜೋಡಿಗೆ ಸಾಂಪ್ರದಾಯಿಕವಾಗಿ ನಿಕಾಹ್ ಮಾಡಿಕೊಡಲಾಗಿದೆ. ಹಿನಾ ಮತ್ತು ಅಬ್ದುಲ್ ಖುರೇಷಿ ಇಸ್ಲಾಂ ಧರ್ಮದ ಪ್ರಕಾರವೇ ಹಿಂದೂ ದೇವಾಲಯದ ಆವರಣದಲ್ಲಿ ಕೈಹಿಡಿದರು.
ಆರ್ಥಿಕವಾಗಿ ದುರ್ಬಲವಾಗಿದ್ದ ಕುಟುಂಬ ವಿವಾಹಕ್ಕೆ ಪರದಾಡುತ್ತಿರುವಾಗ ಸತ್ಯಂ ಸೇವಾ ಯುವಕ ಮಂಡಳಿಯನ್ನು ಸಂಪರ್ಕಿಸಿದ್ದಾರೆ. ಉಚಿತ ಮತ್ತು ಸರಳವಾಗಿ ವಿವಾಹ ಮಾಡಿಕೊಡುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿರುವ ಮಂಡಳಿ ಆ ಕುಟುಂಬಕ್ಕೆ ನೆರವು ನೀಡಲು ಒಪ್ಪಿದ್ದಾರೆ. ಅದರಂತೆ ದೇವಾಲಯದ ಆವರಣದಲ್ಲಿ ಉಭಯ ಕುಟುಂಬಗಳ ಬಂಧುಗಳ ಸಮ್ಮುಖದಲ್ಲಿ ಅವರ ಸಂಪ್ರದಾಯದಂತೆಯೇ ಸರಳವಾಗಿ ವಿವಾಹ ನೆರವೇರಿಸಿಕೊಟ್ಟಿದ್ದಾರೆ.
ಸಕಲ ನೆರವು: ಬರೀ ವಿವಾಹ ಮಾಡಿಕೊಟ್ಟಿದ್ದಲ್ಲದೇ ಮಂಡಳಿಯಿಂದ ನವಜೋಡಿಗೆ ಕುಟುಂಬ ನಿರ್ವಹಣೆಗೆ ಬೇಕಾಗುವ ಅಗತ್ಯ ಪರಿಕರಗಳಾದ ಗಡಿಯಾರ, ಬಟ್ಟೆ, ತಟ್ಟೆ, ಲೋಟ, ಗಾಜಿನ ಪಾತ್ರೆಗಳು, ಸ್ಟೀಲ್ ಬಾಕ್ಸ್, ಹಾಸಿಗೆ, ಮಂಗಳಸೂತ್ರ, ಕುರ್ಚಿ ಸೇರಿದಂತೆ 57 ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಲವು ವರ್ಷಗಳಿಂದ ಮಂಡಳಿ ಈ ಕಾರ್ಯ ಮಾಡುತ್ತಾ ಬಂದಿದೆ. ಇದಕ್ಕಾಗಿ ಅವರಿಂದ ಯಾವುದೇ ವೆಚ್ಚವನ್ನು ಪಡೆದುಕೊಳ್ಳುವುದಿಲ್ಲ. ಇಲ್ಲಿಯವರೆಗೆ ಅನೇಕ ಹಿಂದೂ ಬಡ ಹೆಣ್ಣುಮಕ್ಕಳು ಮಂಡಳಿಯ ಸಾಮಾಜಿಕ ಕಾರ್ಯದಿಂದ ಪ್ರಾಪಂಚಿಕ ಜೀವನವನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ ಮೂವರು ಮುಸ್ಲಿಂ ಜೋಡಿಗಳೂ ಇದ್ದಾರೆ.
ವಿವಾಹದ ಬಳಿಕ ಮಾತನಾಡಿದ ವರ ಅಬ್ದುಲ್ ಖುರೇಷಿ, ಮಂಡಳಿಯ ನೆರವಿನಿಂದಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇವೆ. ಇದು ನನಗೆ ತುಂಬಾ ಸಂತೋಷ ತಂದಿದೆ. 30 ವರ್ಷಗಳಿಂದ ಇಲ್ಲಿ ಮಂತ್ರಾಕ್ಷತೆ ಕಾರ್ಯ ನಡೆಯುತ್ತಿದೆ. ಹಿಂದು ದೇವಾಲಯವಾಗಿದ್ದರೂ ಮೌಲ್ವಿಯವರ ಸಮ್ಮುಖದಲ್ಲಿ ನಿಕಾಹ್ ಮಾಡಲಾಗಿದೆ. ಇದು ಕೋಮು ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಹೇಳಿದ್ದಾರೆ.
ಈ ದೇವಾಲಯ ಜುನಾಗಢ್‌ನ ಅಂಬಿಕಾ ಚೌಕ್‌ನಲ್ಲಿದೆ. ಇದರ ಸುಪರ್ದಿಗೆ ಬರುವ ಸತ್ಯಂ ಸೇವಾ ಯುವಕ ಮಂಡಳಿ ಜಾತಿ-ಧರ್ಮ ಭೇದವಿಲ್ಲದೆ ಹಲವು ಸೇವಾ ಕಾರ್ಯಗಳು ನಡೆಸುತ್ತಿದೆ. ನಿರ್ಗತಿಕರ ಮದುವೆಯನ್ನು ಕೂಡ ಅದು ನಡೆಸುತ್ತದೆ. ಇದು ಜುನಾಗಢದಲ್ಲಿ ಕೋಮು ಸೌಹಾರ್ದತೆಯ ಪರವಾಗಿ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ನಿವಾಸದ ಮೇಲೆ ಡ್ರೋನ್ ಹಾರಾಟ ಶಂಕೆ; ಬಿಗಿ ಪೊಲೀಸ್ ಬಂದೋಬಸ್ತ್