ಘಾಜಿಯಾಬಾದ್ (ಉತ್ತರ ಪ್ರದೇಶ): ವ್ಯಕ್ತಿಯೊಬ್ಬ ತನ್ನ 23 ವರ್ಷದ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಜೊತೆಗೆ ಎರಡು ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿ ಮನೆ ಬೀಗ ಹಾಕಿಕೊಂಡಿರುವ ಘಟನೆ ಘಾಜಿಯಾಬಾದ್ನಲ್ಲಿ ನಡೆದಿದೆ. ನಂತರ ಘಾಜಿಯಾಬಾದ್‌ನ ಮೆಟ್ರೋ ನಿಲ್ದಾಣದಲ್ಲಿ ಕೊಲೆ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಗೌರವ್ ಶರ್ಮಾ (30) ತನ್ನ ಪತ್ನಿ ಲಕ್ಷ್ಮಿಗೆ ಹರಿತವಾದ ಆಯುಧದಿಂದ ಇರಿದಿದ್ದನು. ನಂತರ ಇಟ್ಟಿಗೆಯಿಂದ ಆಕೆಯ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾನೆ. ಜೊತೆಗೆ ತಮ್ಮ ಮಗುವಿಗೂ ಇಟ್ಟಿಗೆಯಿಂದ ಹೊಡೆದು ಹಲ್ಲೆ ಮಾಡಿದ್ದನು. ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದ. ನಂತರ ಗಾಜಿಯಾಬಾದ್‌ನ ಕೌಶಂಬಿ ಮೆಟ್ರೋ ನಿಲ್ದಾಣದಲ್ಲಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಹೇಳಿದ್ದೇನು?: ಡಿಎಲ್‌ಎಫ್ 3ನೇ ಹಂತದ ಎಸ್ ಬ್ಲಾಕ್‌ನಲ್ಲಿರುವ ಮೊದಲ ಮಹಡಿಯ ಬಾಡಿಗೆ ವಸತಿಗೃಹದಲ್ಲಿ ದಂಪತಿ ಜಗಳವಾಡಿದ್ದರು. ನಂತರ ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಭಾನುವಾರ ಮಧ್ಯಾಹ್ನ ಈ ಕೊಲೆಯಲ್ಲಿ ಅಂತ್ಯ ಕಂಡಿದೆ. ಹಲ್ಲೆಗೊಳಗಾದ ಬಾಲಕನ ಕೂಗಿನಿಂದ ಎಚ್ಚೆತ್ತ ಪಕ್ಕದ ಮನೆಗಳ ನಿವಾಸಿಗಳು, ಮನೆಗೆ ಬೀಗ ಹಾಕಿರುವುದನ್ನು ಕಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸ್ ತಂಡ ಬಾಗಿಲು ಒಡೆದು ನೋಡಿದಾಗ ಮಹಿಳೆಯ ಶವದ ಬಳಿ ಗಾಯಗೊಂಡಿದ್ದ ಮಗು ಅಳುತ್ತಿರುವುದು ಕಂಡು ಬಂದಿದೆ. ಮೃತ ಮಹಿಳೆಯ ಮೊಬೈಲ್ ಫೋನ್ ಶೌಚ ಗೃಹದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಆತ್ಮಹತ್ಯೆ ಮಾಡಿಕೊಂಡ ಗೌರವ್ ಶರ್ಮಾ ತನ್ನ ಪತ್ನಿ ಲಕ್ಷ್ಮಿಯನ್ನು ಕೊಂದಿದ್ದಾನೆ ಎಂದು ಎಲ್ಲಾ ಸಾಂದರ್ಭಿಕ ಸಾಕ್ಷ್ಯಗಳು ಸೂಚಿಸುತ್ತವೆ. ನಾವು ಅವರ ವಿರುದ್ಧ ಕೊಲೆಯ ಎಫ್‌ಐಆರ್ ದಾಖಲಿಸಿದ್ದೇವೆ" ಎಂದು ಡಿಎಲ್‌ಎಫ್ ಹಂತ -3 ಪೊಲೀಸ್ ಠಾಣೆ ಎಸ್‌ಎಚ್‌ಒ ದಿನಕರ್ ಹೇಳಿದ್ದಾರೆ.
ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಗಾಯಗೊಂಡ ಮಗುವನ್ನು ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಅಲ್ಲಿಂದ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಕಳುಹಿಸಲಾಯಿತು. ನಂತರ ಮಹಿಳೆಯ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಅವರು ಮಗುವನ್ನು ತಮ್ಮ ಸ್ಥಳೀಯ ಸ್ಥಳವಾದ ಆಗ್ರಾಕ್ಕೆ ಕರೆದೊಯ್ದರು ಎಂದು ದಿನಕರ್ ಮಾಹಿತಿ ನೀಡಿದರು.
ಪೊಲೀಸರ ಪ್ರಕಾರ, ಮೃತರಿಬ್ಬರು ಉತ್ತರ ಪ್ರದೇಶದ ಆಗ್ರಾ ಮೂಲದವರಾಗಿದ್ದು, ಮೂರು ವರ್ಷಗಳ ಹಿಂದೆ ಅವರು ವಿವಾಹವಾಗಿದ್ದರು. ಶರ್ಮಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ನಿರುದ್ಯೋಗಿಯಾಗಿದ್ದರು. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆತನ ಫೋನ್ ಕೂಡ ಬಂದ್ ಆಗಿತ್ತು.
ಆದರೆ, ಸೋಮವಾರ ರಾತ್ರಿ 11:45 ರ ಸುಮಾರಿಗೆ ವ್ಯಕ್ತಿಯೊಬ್ಬರು ಗಾಜಿಯಾದಾಬ್‌ನ ಕೌಶಂಬಿ ಮೆಟ್ರೋ ನಿಲ್ದಾಣದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಪೊಲೀಸರಿಗೆ ತಿಳಿದಿತ್ತು. ಪೊಲೀಸ್ ತಂಡದಿಂದ ಪರಿಶೀಲನೆ ನಂತರ, ಆತ್ಮಹತ್ಯೆ ಮಾಡಿಕೊಂಡ ಕೊಲೆ ಆರೋಪಿ ಗೌರವ್ ಶರ್ಮಾ ಎಂಬುದನ್ನು ಖಚಿತಪಡಿಸಿದೆ. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಟ್ರಾನ್ಸ್ ಹಿಂಡನ್ ವಲಯದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶುಭಂ ಪಟೇಲ್ ಹೇಳಿದರು.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಕುರಿತು ಎಲ್ಲಾ ಕೋನಗಳಿಂದ ತನಿಖೆ ನಡೆಯುತ್ತಿದೆ. ಕೊಲೆಯ ಹಿಂದಿನ ಕಾರಣ ಶೀಘ್ರದಲ್ಲೇ ತಿಳಿಯಲಿದೆ ಎಂದು ಎಸಿಪಿ ಡಿಎಲ್‌ಎಫ್ ವಿಕಾಸ್ ಕೌಶಿಕ್ ತಿಳಿಸಿದರು.
ಇದನ್ನೂ ಓದಿ: ಬೆಳಗಾವಿ: ಹತ್ಯೆ ಬಳಿಕ ವ್ಯಕ್ತಿಯ ಶವ ಬಾವಿಗೆಸೆದ ದುಷ್ಕರ್ಮಿಗಳು