ಮುಂಬೈ (ಮಹಾರಾಷ್ಟ್ರ): ಎರಡಂತಸ್ತಿನ ಕಟ್ಟಡವೊಂದರ ಬಾಲ್ಕನಿಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಇಬ್ಬರು ವೃದ್ಧರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡ ಘಟನೆ ಮಹಾರಾಷ್ಟ್ರ ರಾಜಧಾನಿ ಮುಂಬೈನ ವಿಲೇ ಪಾರ್ಲೆ ಪ್ರದೇಶದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಮೃತರು 70 ವರ್ಷದ ಪುರುಷ ಮತ್ತು 65 ವರ್ಷದ ಮಹಿಳೆಯಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲ್ಲಿನ ವಿಲೇ ಪಾರ್ಲೆ ಪ್ರದೇಶದ ನಾನಾವತಿ ಆಸ್ಪತ್ರೆ ಬಳಿಯ ಸೇಂಟ್ ಬ್ರಾಜ್ ರಸ್ತೆಯಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಪ್ರಿಸ್ಸಿಲಾ ಮಿಸ್ಕ್ವಿಟಾ (65) ಮತ್ತು ರಾಬಿ ಮಿಸ್ಕ್ವಿಟಾ (70) ಎಂಬುವವರೇ ಮೃತರೆಂದು ಗುರುತಿಸಲಾಗಿದೆ. ನೆಲ ಮತ್ತು ಎರಡು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿನ ಬಾಲ್ಕನಿಯ ಒಂದು ಭಾಗ ಕುಸಿದು ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಲ್ಲದೇ, ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೋವೊಂದು ಬಹಿರಂಗವಾಗಿದೆ. ಜನರ ಗುಂಪೊಂದು ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಏಕಾಏಕಿ ಹಳೆ ಕಟ್ಟಡದ ಬಾಲ್ಕನಿಯ ಒಂದು ಭಾಗ ಕುಸಿದು ಬಿದ್ದಿದೆ. ಗುಂಪಿನಲ್ಲಿದ್ದವರ ಮೇಲೆ ಕಟ್ಟಡದ ಅವಶೇಷಗಳು ಬಿದ್ದಿದ್ದು, ಅಲ್ಲಿಯೇ ಇದ್ದ ಯುವಕರು ರಕ್ಷಣೆಗೆ ಧಾವಿಸಿರುವುದು ಈ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ.
ಈ ಘಟನೆಯಲ್ಲಿ ಗಾಯಗೊಂಡಿದ್ದ ನಾಲ್ವರನ್ನು ಕೂಪರ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರಲ್ಲೇ ಇಬ್ಬರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಗಾಯಗೊಂಡ ಮತ್ತಿಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ. ಈ ಘಟನೆ ವಿಷಯ ತಿಳಿದು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ಕೈಗೊಂಡಿವೆ. ಶನಿವಾರ ಸಂಜೆಯಿಂದ ವಿಲೇ ಪಾರ್ಲೆ ಸೇರಿದಂತೆ ಮುಂಬೈನ ಕೆಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಅಗ್ನಿಶಾಮಕ ವಾಹನಗಳು, ಒಂದು ತುರ್ತು ಪರಿಹಾರ ವಾಹನ, ಆಂಬುಲೆನ್ಸ್ ಜೊತೆಗೆ ಪೊಲೀಸ್ ಮತ್ತು ಇತರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮೂರು ಅಂತಸ್ತಿನ ಕಟ್ಟಡ ಕುಸಿತ: ಮತ್ತೊಂದೆಡೆ, ಮುಂಬೈನ ಘಾಟ್‌ಕೋಪರ್ (ಪೂರ್ವ) ರಾಜವಾಡಿ ಕಾಲೋನಿಯಲ್ಲೂ ಮೂರು ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದು ಬಿದ್ದ ಘಟನೆ ವರದಿಯಾಗಿದೆ. ಇಲ್ಲಿ ನಾಲ್ವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಇಬ್ಬರು ಇನ್ನೂ ಒಳಗೆ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ವಿಭಾಗದ ಮುಖ್ಯ ಅಧಿಕಾರಿ ರಶ್ಮಿ ಲೋಖಂಡೆ ತಿಳಿಸಿದ್ದಾರೆ.
ಸ್ಥಳದಲ್ಲಿ ಎನ್‌ಡಿಆರ್‌ಎಫ್ ತಂಡವಿದ್ದು, ಕಟ್ಟಡದೊಳಗೆ ಸಿಲುಕಿರುವ ಇತರ ಜನರನ್ನು ಪತ್ತೆಹಚ್ಚಲು ಮತ್ತು ಹೊರತೆಗೆಯಲು ಪ್ರಯತ್ನಿಸುತ್ತಿದೆ. ನಮ್ಮ ಮೂರು ತಂಡಗಳು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ನೆಲಮಹಡಿ ಸಂಪೂರ್ಣ ಕುಸಿದಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಎನ್‌ಡಿಆರ್‌ಎಫ್‌ನ ಸಹಾಯಕ ಕಮಾಂಡೆಂಟ್ ಸಾರಂಗ್ ಕುರ್ವೆ ಹೇಳಿದ್ದಾರೆ.
ಇದನ್ನೂ ಓದಿ: ಮಳೆ ನೀರಿನಲ್ಲಿ ಕಾರಿನೊಂದಿಗೆ ಕೊಚ್ಚಿ ಹೋಗುತ್ತಿದ್ದ ಮಹಿಳೆಯ ರಕ್ಷಣೆ- ವಿಡಿಯೋ