ಮುಂಬೈ(ಮಹಾರಾಷ್ಟ್ರ): ಕಣ್ಣಿನ ಬಳಿ ಇಲಿ ಕಚ್ಚಿ ಗಾಯಗೊಂಡಿದ್ದ 24 ವರ್ಷದ ರೋಗಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಘಾಟ್ಕೋಪರ್ ನಗರದ ರಾಜವಾಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೋಗಿಯು ಆಲ್ಕೋಹಾಲ್ ಸಂಬಂಧಿತ ಪಿತ್ತಜನಕಾಂಗ ಕಾಯಿಲೆಯಿಂದ ನರಳುತ್ತಿದ್ದನು. ಆಸ್ಪತ್ರೆಗೆ ದಾಖಲಾದ ದಿನದಿಂದಲೇ ಆತನ ಸ್ಥಿತಿ ಗಂಭೀರವಾಗಿತ್ತು ಎಂದು ಬೃಹನ್ ಮುಂಬೈ ಮೆಟ್ರೋಪಾಲಿಟನ್ ಕಾರ್ಪೊರೇಷನ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಆಸ್ಪತ್ರೆಯಲ್ಲಿಯೇ ರೋಗಿಗೆ ಇಲಿ ಕಚ್ಚಿದೆ ಎಂದು ರೋಗಿಯ ಸಂಬಂಧಿಗಳು ಆರೋಪಿಸಿದ್ದರು. ರೋಗಿಯನ್ನು ಐಸಿಯುಗೆ ದಾಖಲಿಸಿದ ನಂತರ ಪ್ರಕರಣದ ತನಿಖೆಗೆ ಮುಂಬೈ ಮೇಯರ್ ಕಿಶೋರಿ ಪಡ್ನೇಕರ್ ಆದೇಶಿಸಿದ್ದರು. ಆಸ್ಪತ್ರೆಯ ಆಡಳಿತ ಮಂಡಳಿ ಕೂಡಾ ಇಲಿ ಕಚ್ಚಿರುವುದನ್ನು ದೃಢಪಡಿಸಿದ್ದರು. ಆದರೆ ಕಣ್ಣಿಗೆ ಯಾವುದೇ ಹಾನಿಯಾಗಿರಲಿಲ್ಲ ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಕುರಾನ್ನಲ್ಲಿ ಬದಲಾವಣೆ ಬಯಸಿದ್ದ ವಾಸೀಂ ರಿಜ್ವಿಗೆ ಪಾಕಿಸ್ತಾನದಿಂದ ಬೆದರಿಕೆ ಕರೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಆಸ್ಪತ್ರೆಯ ಡೀನ್ ಡಾ. ವಿದ್ಯಾ ಠಾಕೂರ್ ಇಲಿಗಳನ್ನು ನಿಯಂತ್ರಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಂಥಹ ಘಟನೆಗಳನ್ನು ತಡೆಯಲು ಹೆಚ್ಚಿನ ಕಾಳಜಿ ವಹಿಸುತ್ತೇವೆ ಎಂದಿದ್ದಾರೆ.