ಮುಂಬೈ: ನೈರುತ್ಯ ಮುಂಗಾರು ದೇಶದ ವಾಣಿಜ್ಯ ರಾಜಧಾನಿ ಪ್ರವೇಶಿಸಿದ್ದು, ಬುಧವಾರ ಸುರಿದ ವರ್ಷದ ಮೊದಲ ಮಳೆಗೆ ಮುಂಬೈ ತತ್ತರಿಸಿದೆ. ನಗರ ಸೇರಿ ಮಹಾರಾಷ್ಟ್ರದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮುಂಬೈನಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ.
ಮುಂದಿನ ನಾಲ್ಕು ದಿನಗಳಲ್ಲಿ ಮುಂಬೈ ಸೇರಿದಂತೆ ಕೊಂಕಣ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರ ಬೆಳಿಗ್ಗೆಯಿಂದಲೇ ಮುಂಬೈನ ಹಲವೆಡೆ ಭಾರೀ ಮಳೆ ಪ್ರಾರಂಭವಾಗಿದೆ. ವರುಣನ ಆರ್ಭಟಕ್ಕೆ ಟ್ರಾಫಿಕ್ ಜಾಮ್ ಮತ್ತು ಕೆಲವೆಡೆ ಭೂಕುಸಿತ ಸಂಭವಿಸಿದೆ. ನವೀ ಮುಂಬೈ ಮತ್ತು ಪಾನ್ವೆಲ್ನಲ್ಲೂ ಭಾರಿ ಮಳೆಯಾಗಿದೆ. ಬದ್ಲಾಪುರದಲ್ಲಿ ಮಳೆಯಿಂದಾಗಿ ಸುರಂಗಮಾರ್ಗದಲ್ಲಿ ಕಾರೊಂದು ನೀರಿನಲ್ಲಿ ಸಿಲುಕಿತ್ತು.
ಮನೆ ಕುಸಿತ:
ಮಳೆಯಿಂದ ಮಲಾದ್ ಮಾಲ್ವಾನಿ ಪ್ರದೇಶದಲ್ಲಿನ ಮನೆಯೊಂದು ಪಕ್ಕದಲ್ಲಿದ್ದ ಮನೆಯ ಮೇಲೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಐವರನ್ನು ಸ್ಥಳಾಂತರಿಸಲಾಗಿದೆ. ಅಲ್ಲದೆ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿಯುವ ಸಾಧ್ಯತೆಯಿದ್ದು, ನೆಲಸಮಗೊಳಿಸಲಾಗುವುದು ಎಂದು ಪುರಸಭೆಯ ವಿಪತ್ತು ನಿರ್ವಹಣಾ ವಿಭಾಗ ತಿಳಿಸಿದೆ.
ರಸ್ತೆಯಲ್ಲಿ ಮೀನು:
ಭಿವಾಂಡಿಯಲ್ಲಿ ಭಾರಿ ಮಳೆಯಿಂದಾಗಿ ಅನೇಕ ಅಂಗಡಿಗಳು ಮತ್ತು ಮನೆಗಳಿಗೆ ನೀರು ನುಗ್ಗಿದೆ. ವಿರಾರ್, ನಲಸೋಪರಾ ಮತ್ತು ವಸೈ ರಸ್ತೆಗಳು ಮಳೆಯಿಂದ ತುಂಬಿ ತುಳುಕುತ್ತಿದ್ದವು. ಶಿವಡಿಯ ನೀರು ತುಂಬಿದ ರಸ್ತೆಯಲ್ಲಿ ಮೀನುಗಳು ಕಂಡುಬಂದವು. ಕೆಲವರು ಮೀನು ಹಿಡಿದುಕೊಂಡು ಹೋಗುತ್ತಿರುವುದು ಕಂಡುಬಂತು.
ರೈಲ್ವೆ ಸಂಚಾರ ಬಂದ್:
ಕುರ್ಲಾ ಮತ್ತು ಸಿಯಾನ್‌ನಲ್ಲಿ ನೀರು ಆವರಿಸುವುದರಿಂದ ಮುಂಬೈ ಉಪನಗರ ರೈಲ್ವೆ ಸಂಚಾರ ಬಂದ್ ಮಾಡಲಾಗಿದೆ. ಥಾಣೆ-ಮುಂಬೈ ರೈಲ್ವೆ ಸೇವೆಯೂ ಸ್ಥಗಿತಗೊಂಡಿದೆ. ಸಿಯಾನ್ ಮಾಟುಂಗಾ ರೈಲು ನಿಲ್ದಾಣಗಳಲ್ಲಿ ನೀರು ನುಗ್ಗಿದ್ದರಿಂದ ಥಾಣೆ-ಮುಂಬೈ ಮುಂಬೈಗೆ ಸಂಚಾರ ಬಂದ್ ಆಗಿದೆ. ಅಲ್ಲದೆ ದಾದರ್, ಮಾಟುಂಗಾ, ಹಿಂದ್ಮಾತಾ, ಕಿಂಗ್ ಸರ್ಕಲ್, ಗಾಂಧಿ ಮಾರುಕಟ್ಟೆ, ಅಂಧೇರಿ, ಮಲಾಡ್ ಮತ್ತು ಮುಂಬೈನ ಇತರ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭಾರಿ ಮಳೆಯಿಂದಾಗಿ ಕೇಂದ್ರ ರೈಲ್ವೆ ಮಾರ್ಗದಲ್ಲಿ ಸ್ಥಳೀಯ ಸೇವೆಗಳೂ ಕೂಡ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಅನೇಕ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದ್ದು, ವೇಳಾಪಟ್ಟಿ ಬದಲಾಯಿಸಲಾಗಿದೆ.
ವಿಮಾನಯಾನದ ಮೇಲೆ ಪರಿಣಾಮ:
ಮಳೆ ಮತ್ತು ಪ್ರತಿಕೂಲ ಹವಾಮಾನವು ವಿಮಾನಯಾನ ಸೇವೆಯ ಮೇಲೂ ಪರಿಣಾಮ ಬೀರಿದೆ. ಅನೇಕ ವಿಮಾನಗಳ ಹಾರಾಟ 15ರಿಂದ 20 ನಿಮಿಷ ವಿಳಂಬವಾಗಿದೆ. ಮುಂಬೈಗೆ ಬರುವ ಅನೇಕ ವಿಮಾನಗಳು ಮಳೆ ಆರ್ಭಟ ಹಿನ್ನೆಲೆ ಆಕಾಶದಲ್ಲೇ ಸುತ್ತಾಡುತ್ತಿರುವುದು ಕಂಡುಬಂತು.
ಧಾರಾಕಾರ ಮಳೆಯ ಹೊರತಾಗಿಯೂ ಪ್ರಯಾಣಿಕರಿಗೆ ಬಸ್ ಸೇವೆ ಕಲ್ಪಿಸಲಾಗಿತ್ತು. ಆದರೆ ಮಳೆಯಿಂದ 50 ಬಸ್ಗಳು ಹಾನಿಗೊಳಗಾಗಿವೆ. ಹಲವೆಡೆ ಬಸ್ಗಳು ನೀರಿನಲ್ಲಿ ಸಿಲುಕಿದ್ದವು. ಮಳೆಯ ನಡುವೆಯೂ 3349 ಬಸ್ಗಳು (BEST) ಸಂಚರಿಸಿವೆ ಎಂದು ತಿಳಿದುಬಂದಿದೆ.
ಸಿಎಂ ಮತ್ತು ಮೇಯರ್ ಪರಿಶೀಲನೆ:
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಅವರೊಂದಿಗೆ ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಲ್ಲಿನ ವಿಪತ್ತು ನಿರ್ವಹಣಾ ಕೋಶಕ್ಕೆ ಭೇಟಿ ನೀಡಿ ನಗರದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮೇಯರ್ ಕಿಶೋರಿ ಪೆಡ್ನೇಕರ್ ಕೂಡ ವಿಪತ್ತು ನಿರ್ವಹಣಾ ಇಲಾಖೆಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ.