ಮುಂಬೈ, ಮಹಾರಾಷ್ಟ್ರ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಹಾಗೂ ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಗೆ ಮತ್ತೊಮ್ಮೆ ಬೆದರಿಕೆ ಸಂದೇಶಗಳು ಬಂದಿವೆ. ಅಂಬಾನಿ ಕಂಪನಿಗೆ ಸೇರಿದ ಇ-ಮೇಲ್ ಐಡಿಗೆ ಶುಕ್ರವಾರ (ಅಕ್ಟೋಬರ್ 27) ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಮೇಲ್ ಬಂದಿದೆ. ನಮ್ಮಲ್ಲಿ ಉತ್ತಮ ಶೂಟರ್‌ಗಳಿದ್ದಾರೆ. 20 ಕೋಟಿ ನೀಡದಿದ್ದರೆ ಕೊಲೆ ಮಾಡುವುದಾಗಿ ಆ ಮೇಲ್‌ನಲ್ಲಿ ದಾಳಿಕೋರರು ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.
ಇದರೊಂದಿಗೆ ಮುಖೇಶ್ ಅಂಬಾನಿ ಅವರ ಭದ್ರತಾ ಉಸ್ತುವಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಮುಂಬೈ ಗಾಮ್‌ದೇವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಕ್ಟೋಬರ್ 27 ರಂದು ಶಾದಾಬ್ ಖಾನ್ ಎಂಬ ವ್ಯಕ್ತಿಯಿಂದ ಬೆದರಿಕೆ ಮೇಲ್ ಬಂದಿರುವುದು ಪತ್ತೆಯಾಗಿದೆ. ಶ್ರೀ ಅಂಬಾನಿ ಅವರ ಮುಂಬೈ ನಿವಾಸ ಆಂಟಿಲಿಯಾದಲ್ಲಿ ಭದ್ರತಾ ಅಧಿಕಾರಿಗಳು ತಮ್ಮ ಗಮನಕ್ಕೆ ಬಂದ ನಂತರ ದೂರು ದಾಖಲಿಸಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 387 ಮತ್ತು 506 (2) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಮುಂಬೈನ ಗಾಮ್‌ದೇವಿ ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷವೂ ಅಂಬಾನಿ ಕುಟುಂಬಕ್ಕೆ ಇದೇ ರೀತಿಯ ಬೆದರಿಕೆಗಳು ಬಂದಿದ್ದವು ಎಂದು ತಿಳಿದುಬಂದಿದೆ. ಆಗಸ್ಟ್ 15, 2022 ರಂದು, ರಿಲಯನ್ಸ್ ಫೌಂಡೇಶನ್ ನಡೆಸುತ್ತಿರುವ ಹರ್ಕಿಸಂದಾಸ್ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಗೆ ಬೆದರಿಕೆ ಕರೆ ಬಂದಿತ್ತು. ಆರೋಪಿಗಳು ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಮತ್ತು ಅಂಬಾನಿ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದರು.
2021ರಲ್ಲಿ ಅಂಬಾನಿ ನಿವಾಸವಾದ ಆಂಟಿಲಿಯಾ ಬಳಿ ಸ್ಫೋಟಕಗಳನ್ನು ಹೊಂದಿರುವ ಸ್ಕಾರ್ಪಿಯೋ ಕಾರೊಂದು ಸಂಚಲನ ಮೂಡಿಸಿತ್ತು. ಈ ಘಟನೆ ನಡೆದ ಒಂದು ವಾರದಲ್ಲಿ ಸ್ಕಾರ್ಪಿಯೋ ಮಾಲೀಕ ಮನ್ಸುಖ್ ಹೀರೆನ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಇನ್‌ಸ್ಪೆಕ್ಟರ್ ಸಚಿನ್ ವಾಜೆ ಆರಂಭದಲ್ಲಿ ಈ ಪ್ರಕರಣಗಳ ತನಿಖೆ ನಡೆಸಿದ್ದರು, ಆದರೆ ನಂತರ ಅವರೇ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿತು. ಬಳಿಕ ಎನ್‌ಐಎ ಅಧಿಕಾರಿಗಳು ಆತನನ್ನು ಬಂಧಿಸಿದ್ದರು. ಈ ಘಟನೆಯಿಂದ ಕೇಂದ್ರ ಸರ್ಕಾರ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಭದ್ರತೆ ಒದಗಿಸುತ್ತಿದೆ.
ಓದಿ: ಸಿರಿವಂತರ ಪಟ್ಟಿ: ಅಗ್ರಸ್ಥಾನದಲ್ಲಿ ಅಂಬಾನಿ, 2ನೇ ಸ್ಥಾನದಲ್ಲಿ ಅದಾನಿ; ರತನ್ ಟಾಟಾಗೆ 12.6 ಮಿಲಿಯನ್ X ಫಾಲೋವರ್ಸ್