ಜಬಲ್ಪುರ(ಮಧ್ಯಪ್ರದೇಶ): ಜೈಲಿನಲ್ಲಿರುವ ತಮ್ಮ ಪತಿಗೆ ಜಾಮೀನು ನೀಡುವಂತೆ ಖಾಂಡ್ವಾ ಮೂಲದ 40 ವರ್ಷದ ಮಹಿಳೆಯೊಬ್ಬರು ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇಂದೋರ್ ಜೈಲಿನಲ್ಲಿರುವ ತನ್ನ ಪತಿಯೊಂದಿಗೆ ದೈಹಿಕ ಸಂಬಂಧ ಹೊಂದುವ ಮೂಲಕ ಮಗು ಪಡೆದುಕೊಳ್ಳಲು ಅನುಮತಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ. ನನ್ನ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದರಿಂದಾಗಿ ಅವರು ಜೈಲಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ನಾನು ತಾಯಿಯಾಗಲು ಬಯಸಿದ್ದೇನೆ. ಆದರೆ, ಪತಿ ಜೈಲಿನಲ್ಲಿರುವ ಕಾರಣಕ್ಕೆ ಈ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಮಹಿಳೆ ದೂರಿದ್ದಾರೆ.
ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ನ್ಯಾಯಪೀಠದ ಮುಂದೆ ಹಾಜರಾದ ವಕೀಲ ವಸಂತ ಡೇನಿಯಲ್ ಎಂಬವರು ಮಹಿಳೆಯ ಪರವಾಗಿ ವಾದ ಮಂಡಿಸಿದರು. ''ಭಾರತ ಸಂವಿಧಾನದ 21ನೇ ಕಲಂ ಪ್ರತಿಯೊಬ್ಬ ಮನುಷ್ಯನಿಗೂ ಮಗು ಹೊಂದುವ ಹಕ್ಕು ನೀಡುತ್ತದೆ'' ಎಂದರು.
''ನನಗೆ 40 ವರ್ಷ. ನನ್ನ ಪತಿ ಕಳೆದ 7 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 351 ಮತ್ತು 302ರ ಅಡಿಯಲ್ಲಿ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಪರಿಸ್ಥಿತಿಯಲ್ಲಿ, ಆತ(ಗಂಡ) ಜೈಲಿನಿಂದ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ, ಮಗು ಪಡೆದುಕೊಳ್ಳುವ ಸಂತೋಷ ಅನುಭವಿಸುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದಕ್ಕೆ ಕಾನೂನು ಮೂಲ ಕಾರಣ. ಆದರೆ, 21ನೇ ವಿಧಿಯು ನನಗೆ ಮಗು ಪಡೆದುಕೊಳ್ಳುವ ಹಕ್ಕು ನೀಡುತ್ತದೆ. ಇದರಿಂದ ಜೈಲಿನಲ್ಲಿರುವ ಪತಿಗೆ ಜಾಮೀನು ನೀಡಿ, ಮಗು ಹೊಂದುವ ಸಂತೋಷ ಪಡೆಯಲು ನನಗೆ ಅವಕಾಶ ನೀಡಬೇಕು'' ಎಂದು ಮಹಿಳೆಯ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ಸರ್ಕಾರದ ಪರ ವಾದಿಸಿದ ವಕೀಲರು ಹೇಳುವುದೇನು?: ''ಈ ಪ್ರಕರಣದಲ್ಲಿ ದೂರುದಾರರಿಗೆ ಯಾವುದೇ ರಿಯಾಯಿತಿ ಇಲ್ಲ. ಏಕೆಂದರೆ ದೂರುದಾರರಿಗೆ ವಯಸ್ಸಾಗಿದೆ. ಅವರು ತಾಯಿಯಾಗುವ ಸಾಧ್ಯತೆ ಕಡಿಮೆ'' ಎಂದು ವಕೀಲ ಸಂತೋಷ್ ಕಠಾರ್ ಸರ್ಕಾರದ ಪರ ವಾದ ಮಂಡಿಸಿದರು.
ಮಹಿಳೆಯ ವೈದ್ಯಕೀಯ ಪರೀಕ್ಷೆಗೆ ಆದೇಶ: ಇಡೀ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿವೇಕ್ ಅಗರ್ವಾಲ್, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಆಕೆಗೆ ತಾಯಿಯಾಗುವ ಸಾಮರ್ಥ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು ಎಂದು ಆದೇಶಿಸಿದರು. ಮಹಿಳೆಯ ವೈದ್ಯಕೀಯ ಪರೀಕ್ಷೆಯನ್ನು ಜಬಲ್‌ಪುರದ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜಿನ ಐವರು ವೈದ್ಯರ ತಂಡ ಮಾಡಬೇಕು. ವೈದ್ಯಕೀಯ ಕಾಲೇಜಿನ ಡೀನ್ ಮೂವರು ಸ್ತ್ರೀರೋಗ ತಜ್ಞರು, ಫಿಸಿಯೋಥೆರಪಿಸ್ಟ್ ಮತ್ತು ಅಂತಃಸ್ರಾವಶಾಸ್ತ್ರಜ್ಞರನ್ನು ಈ ತಂಡದಲ್ಲಿ ಸೇರಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ವೈದ್ಯರ ವರದಿ ಬಂದ ನಂತರ, ಮುಂದಿನ ವಿಚಾರಣೆ ನ.22ರಂದು ನಡೆಯಲಿದೆ.
ಸಂತಾನ ಪ್ರಾಪ್ತಿಗೆ ಮಾತ್ರ ಸಂಬಂಧ: ವೈದ್ಯಕೀಯ ವರದಿಯ ಬಳಿಕ ನ್ಯಾಯಾಲಯ ತನ್ನ ಕಕ್ಷಿದಾರನ ಪರವಾಗಿ ತೀರ್ಪು ನೀಡುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ನೈಸರ್ಗಿಕ ಸಂತಾನ ಪದ್ಧತಿಯ ಹೊರತಾಗಿ ಪರ್ಯಾಯ ವಿಧಾನಗಳನ್ನೂ ಬಳಸಿಕೊಂಡು ಮಗುವನ್ನು ಪಡೆದುಕೊಳ್ಳಬಹುದು ಎನ್ನುತ್ತಾರೆ ವಕೀಲ ವಸಂತ ಡೇನಿಯಲ್. ಆರ್ಟಿಕಲ್ 21 ಪ್ರತಿಯೊಬ್ಬ ಪುರುಷ ಅಥವಾ ಮಹಿಳೆಗೆ ಮಕ್ಕಳನ್ನು ಹೊಂದುವ ಹಕ್ಕನ್ನು ನೀಡುತ್ತದೆ. ಇದಕ್ಕಾಗಿ ದಂಪತಿ ದೈಹಿಕ ಸಂಬಂಧವನ್ನು ಹೊಂದಬಹುದು ಎಂದು ತಿಳಿಸಿದರು.
ರಾಜಸ್ಥಾನ ಹೈಕೋರ್ಟ್ ತೀರ್ಪಿನ ಉಲ್ಲೇಖ: ಇದುವರೆಗೆ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಈ ರೀತಿಯ ಕೆಲವು ಪ್ರಕರಣಗಳು ಬಂದಿವೆ. ಅದೇ ರೀತಿಯ ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ವಕೀಲ ವಸಂತ್ ಡೇನಿಯಲ್ ಅವರು, ರಾಜಸ್ಥಾನ ಹೈಕೋರ್ಟ್‌ನ ವಿಭಾಗೀಯ ಪೀಠದಿಂದ ಹಿಂದೆ ನೀಡಿದ್ದ ತೀರ್ಪಿನ ಕುರಿತು ಕೋರ್ಟ್ನ ಗಮನಕ್ಕೆ ತಂದರು. ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಅವರ ನ್ಯಾಯಪೀಠವು ತನ್ನ ಆದೇಶದಲ್ಲಿ ರಾಜಸ್ಥಾನ ಹೈಕೋರ್ಟ್‌ನ ತೀರ್ಪನ್ನು ಉಲ್ಲೇಖ ಮಾಡಿದೆ.
ಇದನ್ನೂ ಓದಿ: ಛತ್ತೀಸ್‌ಗಢ: ನಕ್ಸಲ್‌ಪೀಡಿತ ಪ್ರದೇಶದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ 200ಕ್ಕೂ ಹೆಚ್ಚು ಸಿಬ್ಬಂದಿ ನಾಪತ್ತೆ