ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಪನ್ನಾ ಜಿಲ್ಲೆಯಲ್ಲಿ ಶೀತ-ನೆಗಡಿ ಸಮಸ್ಯೆಯಿಂದ ಬಳಲುತ್ತಿದ್ದ ಮೂವರು ಮಕ್ಕಳು ಮೃತಪಟ್ಟಿದ್ದು, ಇನ್ನೂ ಮೂರು ಮಕ್ಕಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದ್ದು, ಇದು ಮೂರನೇ ಅಲೆಯ ಸಂಕೇತವೇ ಎಂಬ ಆತಂಕ ಶುರುವಾಗಿದೆ.
ಮೂವರು ಮಕ್ಕಳ ಸಾವಿನ ಸುದ್ದಿ ಕೇಳಿ ಜಿಲ್ಲೆಯ ಅಧಿಕಾರಿಗಳು ಆಘಾತಕ್ಕೊಳಗಿದ್ದಾರೆ. ಇದರೊಂದಿಗೆ ಮಾತಾ, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಜಿಲ್ಲೆಯ ಪೂರ್ಣೋತ್ತಂಪೂರ್ ಪಂಚಾಯತ್‌ನ ಚಂದಮರಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಮಾಡಿದ ಎಲ್ಲಾ ಆರ್‌ಟಿಪಿಸಿಆರ್ ಪರೀಕ್ಷೆಗಳು ಕೋವಿಡ್ ನೆಗೆಟಿವ್ ಎಂದು ಬಂದಿವೆ. ಶೀತದಿಂದ ಬಳಲುತ್ತಿರುವ ಇನ್ನೂ 14 ಮಕ್ಕಳ ಮಾದರಿಗಳನ್ನು ಸಂಗ್ರಹಿಸಿದ ವೈದ್ಯರು, ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ.
ಜಿಲ್ಲಾ ವೈದ್ಯಾಧಿಕಾರಿ ಪ್ರಕಾರ, ಇಬ್ಬರು ಮಕ್ಕಳು ಮಾತ್ರ ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಅಪೌಷ್ಟಿಕತೆಯಿಂದ ಮತ್ತೊಂದು ಮಗು ಮೃತಪಟ್ಟಿದೆ ಎಂದು ಹೇಳಿದ್ದಾರೆ. ಕಾಲಕಾಲಕ್ಕೆ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಪರಿಸ್ಥಿತಿ ಪರಿಶೀಲಿಸುತ್ತಿದ್ದೇವೆ ಎಂದು ವಿವರಿಸಿದ್ದಾರೆ.
ಕೊರೊನಾ ಮೂರನೇ ಹಂತದ ಪರಿಣಾಮ ರಾಷ್ಟ್ರವ್ಯಾಪಿ ಸಂಭವಿಸಲಿದೆ. ಎಚ್ಚರದಿಂದಿರುವಂತೆ ತಜ್ಞರು ಈಗಾಗಲೇ ಸೂಚಿಸಿದ್ದಾರೆ.