ನಿಜಾಮಾಬಾದ್ (ತೆಲಂಗಾಣ): ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾಳೆ ಎಂಬ ಕಾರಣಕ್ಕೆ ತಾಯಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಮಗಳನ್ನೇ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ನಿಜಾಮಾಬಾದ್ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ನಾಗಲಕ್ಷ್ಮೀ (6) ತಾಯಿಯಿಂದ ಕೊಲೆಯಾದ ನತದೃಷ್ಟೆ. ಆಗಸ್ಟ್ 22ರಂದು ತಾಯಿ ದುರ್ಗಾಭವಾನಿ ನಿಜಾಮಾಬಾದ್ ರೈಲ್ವೆ ನಿಲ್ದಾಣದಲ್ಲಿಯೇ ಮಗಳ ಕತ್ತು ಹಿಸುಕಿ ಹತ್ಯೆ ಮಾಡಿ, ಬಳಿಕ ಮೃತದೇಹವನ್ನು ಚಿನ್ನಾಪುರ ಅರಣ್ಯ ಪ್ರದೇಶದ ಎಸೆದಿದ್ದರು.
ವಿಜಯವಾಡ ಮೂಲದ ದುರ್ಗಾಭವಾನಿಗೆ ಗುರುನಾಥಂ ಎಂಬಾತನೊಂದಿಗೆ ಮದುವೆಯಾಗಿತ್ತು. ದಂಪತಿಗೆ ನಾಗಲಕ್ಷ್ಮೀ ಹಾಗೂ 14 ತಿಂಗಳ ಗೀತಾಮಾಧವಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಪತಿ ಗುರುನಾಥಂ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಈ ಕೆಲಸ ಬಿಡುವಂತೆ ದುರ್ಗಭವಾನಿ ಜಗಳವಾಡುತ್ತಿದ್ದರಂತೆ. ಹೀಗಾಗಿ ಕಳೆದ ಆರು ತಿಂಗಳಿಂದ ಪತಿ ಆಟೋ ಓಡಿಸಲು ಶುರು ಮಾಡಿದ್ದರು.
ಆದರೆ, ಜುಲೈ 14ರಂದು ದುರ್ಗಾಭವಾನಿ ತನ್ನ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದಾರೆ. ಈ ಬಗ್ಗೆ ಭವಾನಿಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಇತ್ತ, ತನ್ನಿಬ್ಬರು ಮಕ್ಕಳೊಂದಿಗೆ ನಿಜಾಮಾಬಾದ್ ನಗರಕ್ಕೆ ಬಂದಿದ್ದ ದುರ್ಗಾಭವಾನಿ ಕೆಲವು ದಿನ ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಆವರಣದಲ್ಲಿ ಕಾಲ ಕಳೆದಿದ್ದರು. ಈ ಸಂದರ್ಭದಲ್ಲಿ ಶ್ರೀನು ಎಂಬಾತನ ಪರಿಚಯವಾಗಿದೆ. ಇದು ವಿವಾಹೇತರ ಸಂಬಂಧಕ್ಕೆ ತಿರುಗಿತ್ತು ಎಂದು ಹೇಳಲಾಗಿದೆ.
ಆದ್ದರಿಂದ ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾಳೆ ಎಂದು ಭಾವಿಸಿ ಮಗಳನ್ನು ದುರ್ಗಾಭವಾನಿ ಕೊಲೆ ಮಾಡಿದ್ದಾಳೆ. ಮರುದಿನ ಹಣಕ್ಕಾಗಿ ದುರ್ಗಾಭವಾನಿ ತನ್ನ ತಾಯಿಗೆ ಕರೆ ಮಾಡಿದ್ದಾಳೆ. ಈ ವಿಷಯ ತಿಳಿದ ಪತಿ ಗುರುನಾಥಂ ಪೊಲೀಸರನ್ನು ಸಂಪರ್ಕಿಸಿ, ಫೋನ್ ಲೋಕೇಶನ್ ಆಧಾರದ ಮೇಲೆ ದುರ್ಗಾಭವಾನಿ ನಿಜಾಮಾಬಾದ್ ರೈಲು ನಿಲ್ದಾಣದಲ್ಲಿರುವುದು ಪತ್ತೆ ಹಚ್ಚಲಾಗಿತ್ತು.
ಅಲ್ಲಿಂದ ಪತಿ ಗುರುನಾಥಂ ಆಗಸ್ಟ್ 28ರಂದು ನಿಜಾಮಾಬಾದ್‌ಗೆ ಬಂದು ಮಕ್ಕಳು ಬಗ್ಗೆ ಎಂದು ಪತ್ನಿಯನ್ನು ವಿಚಾರಿಸಿದ್ದಾರೆ. ಆಗ ಪುಟ್ಟ ಮಗು ನಿದ್ರಿಸುತ್ತಿದೆ, ದೊಡ್ಡ ಮಗಳು ನಾಗಲಕ್ಷ್ಮೀ ತನ್ನ ಸೋದರ ಸಂಬಂಧಿಯಾದ ಶ್ರೀನು ಜೊತೆಯಲ್ಲಿದ್ದಾರೆ ಎಂದು ತಿಳಿಸಿದ್ದಾಳೆ. ಇದರಿಂದ ಅನುಮಾನಗೊಂಡ ಪತಿ, ಯಾರು ಶ್ರೀನು ಎಂದು ಪ್ರಶ್ನಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ದುರ್ಗಾಭವಾನಿ ಮತ್ತು ಪ್ರಿಯಕರ ಶ್ರೀನು ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮೈಸೂರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಅನಾರೋಗ್ಯದಿಂದ ಬಯಲಾದ ಪ್ರಕರಣ