ಜೈಸಲ್ಮೇರ್, ರಾಜಸ್ಥಾನ : ಫೈರಿಂಗ್ ಅಭ್ಯಾಸದ ವೇಳೆಯಲ್ಲಿ ಶೆಲ್ ಸ್ಫೋಟಗೊಂಡು ಓರ್ವ ಬಿಎಸ್ಎಫ್ ಯೋಧ ಹುತಾತ್ಮನಾಗಿರುವ ಘಟನೆ ರಾಜಸ್ಥಾನ ಕಿಶನ್ಗಢ ಪ್ರದೇಶದಲ್ಲಿರುವ ಬಿಎಸ್ಎಫ್ ಫೈರಿಂಗ್ ರೇಂಜ್ನಲ್ಲಿ ನಡೆದಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.
ಪಂಜಾಬ್ ಫ್ರಾಂಟಿಯರ್ನ 136ನೇ ಬೆಟಾಲಿಯನ್ನ ಯೋಧರು ಫೈರಿಂಗ್ ಅಭ್ಯಾಸಕ್ಕಾಗಿ ಕಿಶನ್ಗಢಕ್ಕೆ ಬಂದಿದ್ದರು. ಈ ವೇಳೆ ಅವಘಡ ಸಂಭವಿಸಿದ್ದು, ಗಾಯಗೊಂಡ ಯೋಧರನ್ನು ತಕ್ಷಣವೇ ರಾಮಗಢದಲ್ಲಿರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಥಮ ಚಿಕಿತ್ಸೆಗಾಗಿ ರವಾನಿಸಲಾಗಿತ್ತು.
ಹುತಾತ್ಮನಾಗಿರುವ ಯೋಧನನ್ನು ಸಂದೀಪ್ ಕುಮಾರ್ ಎಂದು ಗುರ್ತಿಸಲಾಗಿದೆ. ಪ್ರಥಮ ಚಿಕಿತ್ಸೆಯ ನಂತರ ಗಾಯಗೊಂಡ ಯೋಧರನ್ನು ಜೈಸಲ್ಮೇರ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಗಾಯಗೊಂಡ ಯೋಧರನ್ನು 73ನೇ ಕಾರ್ಪ್ಸ್‌ನ ಶಿವರಾಜ್ ಯಾದವ್, ಮಣಿಂದರ್ ಮೆಹ್ತೋ, ಪಿ.ಸಿ. ಸೈನಿ, ಜಿ.ವಿ. ರಾವ್, ಪ್ರೀತಮ್ ಸಿಂಗ್ ಮತ್ತು ಮಧು ಬಾಗ್ಚಿ ಮತ್ತು 116ನೇ ಕಾರ್ಪ್ಸ್‌ನ ಸೌರಭ್ ಕುಮಾರ್ ಮತ್ತು ಕಿರಣ್ ಕುಮಾರ್ ಎಂದು ಗುರ್ತಿಸಲಾಗಿದೆ.
ಬಿಎಸ್‌ಎಫ್‌ನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಯೋಧನ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: CSE Report : ಈಶಾನ್ಯ ರಾಜ್ಯಗಳಲ್ಲಿ ಗುವಾಹಟಿ, ಅಗರ್ತಲಾದಲ್ಲಿ ಹೆಚ್ಚು ಮಾಲಿನ್ಯ